ಬೆಳ್ತಂಗಡಿ: ನೀರು ಇದ್ದರೆ ಕಾಡು ಚೆಂದ, ನಾರಿ ಇದ್ದರೆ ಮನೆ ಚೆಂದ ಎಂಬ ಮಾತಿನೊಂದಿಗೆ ಕುಟುಂಬದಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ ಸಾಮಾಜಿಕ ಮತ್ತು ರಾಜಕೀಯ ವಿಷಯಗಳಲ್ಲಿ ಮಹಿಳೆಯರು ಸಬಲರಾಗಿದ್ದಾರೆ.ತಾಯಿಯಾಗಿ ನಾವು ಮಕ್ಕಳಿಗೆ ಕಲಿಸಿದ್ದು ಅವರ ಜೀವನದಲ್ಲಿ ಪ್ರಭಾವ ಬೀರುತ್ತದೆ. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸಬೇಕು ಎಂದು ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ರವರು ಮಾ.13ರಂದು ಕುಟ್ರುಪ್ಪಾಡಿ ಚರ್ಚ್ ಹಾಲ್ ನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಧರ್ಮಾಧ್ಯಕ್ಷ ದೀಕ್ಷೆಯ ಬೆಳ್ಳಿ ಹಬ್ಬ ಆಚರಿಸುತ್ತಿರುವ ಪರಮಪೂಜ್ಯ ಧರ್ಮಾಧ್ಯಕ್ಷರಿಗೆ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಡೈಸಿ ಜೋಯ್ ರವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಕಲಚೇತನರ ಸಂಯೋಜಕರು ಅಕ್ಷತಾ ಕಡಬ ಇವರು ತರಕಾರಿ ತೋಟ ರಚನೆ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಿ, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರ ಬಗ್ಗೆ ಮಾತನಾಡಿದರು.
ಇನ್ನೋರ್ವ ಅತಿಥಿ ಡಾ.ಶ್ವೇತಾ ರಸ್ಕೀನ್ಹಾ ಎಚ್.ಒ.ಡಿ ಸಮಾಜ ಕಾರ್ಯ ವಿಭಾಗ ಸಂತ ಎಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾನಿಲಯ ಮಂಗಳೂರು ಇವರು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸಂಘದ ಸದಸ್ಯೆಯ ಮಗಳಾದ ಕು. ಸಂಗೀತ ಇವರನ್ನು ಸನ್ಮಾನಿಸಿ, ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ತಿಳಿಸಿದರು.
ಕುಟ್ರುಪ್ಪಾಡಿ ಚರ್ಚಿನ ಧರ್ಮಗುರುಗಳು ಫಾ.ವರ್ಗೀಸ್ ಪುದಿಯೆಡತ್ ರವರು ಶುಭ ಹಾರೈಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಜನ ಶಿಕ್ಷಣ ಟ್ರಸ್ಟ್ ಮಂಗಳೂರು ಇದರ ನಿರ್ದೇಶಕ ಶೀನ ಶೆಟ್ಟಿ ಇವರು ಲಿಂಗ ಸಮಾನತೆ ಹಾಗೂ ನ್ಯಾಯ ಬಗ್ಗೆ ತರಬೇತಿ ನೀಡಿದರು.ಜನ ಶಿಕ್ಷಣ ಟ್ರಸ್ಟ್ ಸಂಸ್ಥೆಯ ಸಹಾಯಕ ನಿರ್ದೇಶಕರು ಕೃಷ್ಣ ಮೂಲ್ಯ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಸ್ಥೆಯ ನಿರ್ದೇಶಕ ಫಾ.ಬಿನೋಯಿ ಎಂ.ಜೆ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ನೆಲ್ಯಾಡಿ, ಕುಟ್ರುಪ್ಪಾಡಿ ಮತ್ತು ನೆಟ್ಟಣ ಮಹಾಸಂಘಗಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಲೋಶಿಯಸ್ ಕಾಲೇಜು ಮಂಗಳೂರು ಸಮಾಜ ಕಾರ್ಯ ವಿಭಾಗ ವಿದ್ಯಾರ್ಥಿಗಳು, ಡಿ.ಕೆ.ಆರ್.ಡಿ.ಎಸ್ ಸಿಬ್ಬಂದಿಗಳು ಹಾಗೂ ಸಂಘಗಳ ಸದಸ್ಯರು ಭಾಗವಹಿಸಿದ್ದರು.
ಭಾಗ್ಯೋದಯ ಮಹಾಸಂಘ ನೆಟ್ಟಣ ಇದರ ಸದಸ್ಯರು ಪ್ರಾರ್ಥನೆ ಗೀತೆ ಹಾಡಿದರು.ಒಕ್ಕೂಟದ ಕಾರ್ಯದರ್ಶಿ ವಲ್ಸಮ್ಮ ಎ.ಜೆ ಎಲ್ಲರನ್ನು ಸ್ವಾಗತಿಸಿದರು.ಜೊತೆ ಕಾರ್ಯದರ್ಶಿ ನಿಶಾ ವಂದಿಸಿದರು.ಕಾರ್ಯಕಾರಿ ಸಮಿತಿ ಸದಸ್ಯೆ ರೆಬೆಕಾ ಕಾರ್ಯಕ್ರಮ ನಿರೂಪಿಸಿದರು.