ಉಜಿರೆ: ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಭಾಸ್ಕರ ಚಕ್ರವರ್ತಿ ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಮಾ.09ರಂದು ಭೇಟಿ ನೀಡಿದರು.
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ದೇವೇಂದ್ರ ಕುಮಾರ್.ಪಿ ಇವರು ಸ್ವಾಗತಿಸಿ ಬರಮಾಡಿಕೊಂಡರು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಮಾಜ ಸೇವೆಯನ್ನು ವಿವರಿಸಿದರು.ನಿರುದ್ಯೋಗಿಗಳ ಬಾಳಿಗೆ ಬೆಳಕು ನೀಡಿದ ರುಡ್‌ಸೆಟಿ ಸಂಸ್ಥೆಯ ಕಾರ್ಯವೈಖರಿಯನ್ನು ಕೇಂದ್ರ ಸರಕಾರ ಮೆಚ್ಚಿ ಅಳವಡಿಸಿಕೊಂಡಿದ್ದು, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರುಡ್‌ಸೆಟ್ ಸಂಸ್ಥೆಯ ಬೆಳವಣಿಗೆಯಲ್ಲಿ ಕೆ.ಎನ್ ಜನಾರ್ದನ್ ಹಾಗೂ ಎಂ.ಜನಾರ್ದನ್ ಇವರು ಸಲ್ಲಿಸಿದ ಅವಿರತ ಸೇವೆಯನ್ನು ನೆನಪಿಸಿಕೊಂಡರು.
ಮಿತದರದಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಸೇವೆಯನ್ನು ಶ್ಲಾಸಿದ ಅವರು ಈ ಆಸ್ಪತ್ರೆಗೆ ಕೆನರಾ ಬ್ಯಾಂಕ್ ನಿಂದ ಬೇಕಾಗುವ ಸಹಾಯ ನೀಡಲು ಸಿದ್ಧರಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ 25 ವರ್ಷ ಪ್ರಾಯದ ಅವಿವಾಹಿತ ಮಹಿಳೆಯ ಹೊಟ್ಟೆಯಲ್ಲಿದ್ದ 4 ಕೆಜಿ ತೂಕದ ಗೆಡ್ಡೆಗೆ ಕ್ಲಷ್ಟಕರ ಶಸ್ತ್ರಚಿಕಿತ್ಸೆ ನಡೆಸಿದ ವಿಷಯ ತಿಳಿದು ಕೆನರಾ ಬ್ಯಾಂಕ್ ಪರವಾಗಿ ಪ್ರಸೂತಿ ತಜ್ಞರಾದ ಡಾ.ಪ್ರಿಯಾಂಕ ಹಾಗೂ ಅರೆವಳಿಕೆ ತಜ್ಞರಾದ ಡಾ.ಚೈತ್ರಾ ಆರ್ ಇವರನ್ನು ಸನ್ಮಾನಿಸಿದರು.ಈ ಶಸ್ತ್ರಚಿಕಿತ್ಸೆಯಲ್ಲಿ ಡಾ.ಸ್ವರ್ಣಲತಾ ಸಹಕರಿಸಿದ್ದರು.
ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ದನ್ ಉಪಸ್ಥಿತರಿದ್ದರು.