ಉಜಿರೆ: ಉಜಿರೆ ಶ್ರೀ ಧ. ಮಂ. ಕಾಲೇಜಿನ ಎನ್.ಸಿ.ಸಿ. (ಆರ್ಮಿ, ನೇವಿ) ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ ಕೆಡೆಟ್’ಗಳನ್ನು ಇಂದು ಕಾಲೇಜಿನಲ್ಲಿ ಗೌರವಿಸಲಾಯಿತು.
ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್’ನಲ್ಲಿ ಭಾಗವಹಿಸಿದ್ದ (2024 ನೇ ಸಾಲಿನಲ್ಲಿ 3, 2023ನೇ ಸಾಲಿನಲ್ಲಿ 5) 8 ಮಂದಿ ಕೆಡೆಟ್’ಗಳು, ನೌಕಾ ವಿಭಾಗದ ನೌ ಸೈನಿಕ್ ಶಿಬಿರದಲ್ಲಿ 2023ನೇ ಸಾಲಿನಲ್ಲಿ ಪಾಲ್ಗೊಂಡಿದ್ದ 3 ಹಾಗೂ 2022ನೇ ಸಾಲಿನಲ್ಲಿ ಪಾಲ್ಗೊಂಡಿದ್ದ ಓರ್ವ ಸಹಿತ 12 ಕೆಡೆಟ್’ಗಳನ್ನು ಕಾಲೇಜಿನ ಪ್ರವೇಶ ದ್ವಾರದಲ್ಲಿ ಪ್ರಾಂಶುಪಾಲರು, ಅಧ್ಯಾಪಕರ ತಂಡ, ಎನ್.ಸಿ.ಸಿ. ಕೆಡೆಟ್ ಗಳು ಹಾಗೂ ವಿದ್ಯಾರ್ಥಿ ಸಮೂಹದವರು ಸ್ವಾಗತಿಸಿ, ಚೆಂಡೆ ವಾದನ ತಂಡದೊಂದಿಗೆ ಕಾಲೇಜು ವರಾಂಡದಲ್ಲಿ ಮೆರವಣಿಗೆ ನಡೆಸಿದರು.
ಕಾಲೇಜು ಒಳಾಂಗಣದಲ್ಲಿ ಕೆಡೆಟ್ ಗಳು ಹಾಗೂ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, “ನಮ್ಮ ಕಾಲೇಜಿನ ಎನ್.ಸಿ.ಸಿ. ಕೆಡೆಟ್’ಗಳು ವಿಶೇಷ ಸಾಧನೆ ಮಾಡಿ ತಮ್ಮ ಘಟಕದ ಹೆಸರು ಬೆಳಗಿರುವುದಷ್ಟೇ ಅಲ್ಲದೆ, ರಾಷ್ಟ್ರಮಟ್ಟದಲ್ಲಿ ನಮ್ಮ ಕಾಲೇಜಿಗೆ ಹೆಸರು ತಂದಿದ್ದಾರೆ. ದೆಹಲಿಯ ಕೊರೆಯುವ ಚಳಿಯಲ್ಲೂ ಕಠಿಣ ತರಬೇತಿ ಪಡೆದು, ಪರಿಶ್ರಮಪಟ್ಟು ಸಾಧನೆ ಮಾಡಿದ ಕೆಡೆಟ್’ಗಳ ಬಗ್ಗೆ ಕಾಲೇಜು ಹೆಮ್ಮೆಪಡುತ್ತದೆ” ಎಂದರು.
2024ನೇ ಸಾಲಿನ ಗಣರಾಜ್ಯೋತ್ಸವ ಪರೇಡ್’ನಲ್ಲಿ ಭಾಗವಹಿಸಿದ್ದ ಕೆಡೆಟ್’ಗಳಾದ ತರುಣ್ ಎಸ್. (ನೇವಿ), ರಾಧಿಕಾ ಮತ್ತು ಉದಿತ್ ಯು.ವಿ. (ಆರ್ಮಿ), 2023 ನೇ ಸಾಲಿನ ಗಣರಾಜ್ಯೋತ್ಸವ ಪರೇಡ್’ನಲ್ಲಿ ಭಾಗವಹಿಸಿದ್ದ ಹೇಮಂತ್ ಎಂ.ಜಿ. (ನೇವಿ), ಅನನ್ಯಾ ಕೆ.ಪಿ. (ನೇವಿ), ರಕ್ಷಿತ್ ಎಂ.ಜಿ. (ಆರ್ಮಿ), ಭರತ್ (ಆರ್ಮಿ) ಮತ್ತು ದೀಕ್ಷಿತ್ ಕುಮಾರ್ (ಆರ್ಮಿ), 2023 ನೇ ಸಾಲಿನ ನೌ ಸೈನಿಕ್ ಶಿಬಿರದಲ್ಲಿ (ನೇವಿ) ಭಾಗವಹಿಸಿದ್ದ ಅಂಕಿತ್ ಡಿ.ಎ., ಜಯಶ್ರೀ ಮತ್ತು ಬಿ.ಎಸ್. ರಾಘವೇಂದ್ರ; 2022 ನೇ ಸಾಲಿನ ನೌ ಸೈನಿಕ್ ಶಿಬಿರದಲ್ಲಿ ಭಾಗವಹಿಸಿದ್ದ ಖುಷಿ ಎಂ. ಅವರಿಗೆ ಪ್ರಾಂಶುಪಾಲರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ (ಐಕ್ಯುಎಸಿ) ಸಂಯೋಜಕ, ಎನ್.ಸಿ.ಸಿ. ಆರ್ಮಿ ನಿವೃತ್ತ ಅಧಿಕಾರಿ ಕ್ಯಾಪ್ಟನ್ ಜಿ.ಆರ್. ಭಟ್ ಸ್ವಾಗತಿಸಿ, ಪ್ರಸ್ತಾವಿಸಿದರು. “ದೆಹಲಿಯ ಗಣರಾಜ್ಯೋತ್ಸವ ಪರೇಡ್, ನೌ ಸೈನಿಕ್ ಶಿಬಿರ, ಥಲ್ ಸೈನಿಕ್ ಶಿಬಿರಗಳಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆಯುವುದು ಲಕ್ಷಾಂತರ ಕೆಡೆಟ್’ಗಳ ಕನಸು. ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಅಂಥ ಅಪೂರ್ವ ಅವಕಾಶ ನಮ್ಮ ಕಾಲೇಜಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಲಭಿಸಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿ” ಎಂದರು.
ಕಾಲೇಜಿನ ಆಡಳಿತ ಕುಲಸಚಿವೆ ಡಾ. ಶಲೀಪ್ ಕುಮಾರಿ, ಕಲಾ ನಿಕಾಯದ ಡೀನ್, ಎನ್.ಸಿ.ಸಿ. ನೇವಿ ನಿವೃತ್ತ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಡಾ. ಶ್ರೀಧರ್ ಭಟ್, ವಾಣಿಜ್ಯ ನಿಕಾಯದ ಡೀನ್ ಶಕುಂತಳಾ, ವಿಜ್ಞಾನ ನಿಕಾಯದ ಡೀನ್ ಡಾ. ಸವಿತಾ, ಎನ್.ಸಿ.ಸಿ. ಆರ್ಮಿ ಅಧಿಕಾರಿಗಳಾದ ಲೆಫ್ಟಿನೆಂಟ್ ಭಾನುಪ್ರಕಾಶ್ ಮತ್ತು ಲೆಫ್ಟಿನೆಂಟ್ ಶುಭಾರಾಣಿ, ನೌಕಾ ವಿಭಾಗದ ಕೇರ್ ಟೇಕಿಂಗ್ ಆಫೀಸರ್ ಹರೀಶ್ ಶೆಟ್ಟಿ, ಕೆಡೆಟ್’ಗಳು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಕಾಲೇಜಿನ ಸಮಸ್ತ ವಿದ್ಯಾರ್ಥಿ ಸಮೂಹದವರು ವರಾಂಡದಲ್ಲಿ ಸುತ್ತ ನಿಂತು ಸಂಭ್ರಮದಲ್ಲಿ ಭಾಗಿಯಾದರು.