ಗುರುವಾಯನಕೆರೆ: ಶೈಕ್ಷಣಿಕವಾಗಿ ಯಾವತ್ತೂ ಕರಾವಳಿ ಜಿಲ್ಲೆಗಳು ಮುಂಚೂಣಿಯಲ್ಲಿರುತ್ತವೆ.ಗುಣಮಟ್ಟದ ಶಿಕ್ಷಣ ನೀಡಿದ ಹಿರಿಮೆ ಈ ಭಾಗದ ಶಿಕ್ಷಕರದ್ದಾಗಿದೆ. ಅಂಥ ಶಿಕ್ಷಕರನ್ನು ರೂಪಿಸಿದ ಕೀರ್ತಿ
ಮುಖ್ಯೋಪಾಧ್ಯಾಯರಿಗೆ ಸಲ್ಲುತ್ತದೆ.ಹೀಗಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ನಮ್ಮ ನಾಡಿನ ಮುಖ್ಯೋಪಾಧ್ಯಾಯರು ನೀಡಿದ ಕೊಡುಗೆ ಅವಿಸ್ಮರಣೀಯವಾದುದು ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಹೇಳಿದರು.
ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾ ಸಾಗರ ಕ್ಯಾಂಪಸ್ ನಲ್ಲಿ ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಗಳ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ ಸಂಯೋಜಕರಾದ ಸಿದ್ಧಲಿಂಗ ಸ್ವಾಮಿ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಮಕೃಷ್ಣ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಎಡ್ವರ್ಡ್ ಡಿಸೋಜ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿಶೋರ್ ಕುಮಾರ್ , ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶಿವಶಂಕರ ರಾವ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶೀಲಾ ಹೆಗ್ಗಡೆ ಪ್ರಾರ್ಥನೆ ಸಲ್ಲಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ ಸ್ವಾಗತಿಸಿದರು.ಸಮನ್ವಯಾಧಿಕಾರಿ ಮೋಹನ್ ಕುಮಾರ್ ಧನ್ಯವಾದ ಸಮರ್ಪಿಸಿದರು.ಶಿಕ್ಷಣ ಸಂಯೋಜಕರಾದ ಚೇತನಾಕ್ಷಿ ನಿರೂಪಿಸಿದರು.