ಉಜಿರೆ: ಮಾತಿನ ಗಾರುಡಿಗ, ಶಬ್ಧಬ್ರಹ್ಮ, ಮಂತ್ರಶಕ್ತಿಯ ವಾಗ್ಮಿ ಎಂದೇ ಚಿರಪರಿಚಿತರಾಗಿರುವ ಜ್ಞಾನಪೀಠ ಪುರಸ್ಕೃತ ದ.ರಾ. ಬೇಂದ್ರ ನಿನ್ನೆ ಬುಧವಾರ ಉಜಿರೆಯಲ್ಲಿ ವನರಂಗ ಬಯಲು ಮಂದಿರದಲ್ಲಿ ಪ್ರತ್ಯಕ್ಷರಾದರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆ ಸಮೂಹ ಉಜಿರೆಯ ಆಶ್ರಯದಲ್ಲಿ ಜ.31ರಂದು ಉಜಿರೆಯ ವನರಂಗ ಮಂದಿರದಲ್ಲಿ ಎಸ್.ಡಿ.ಎಂ. ಕಲಾ ಕೇಂದ್ರದ ವಿದ್ಯಾರ್ಥಿಗಳು ‘ಬೇಂದ್ರೆ ಅಂದ್ರೆ …’ ನಾಟಕವನ್ನು ಸಾದರಪಡಿಸಿದರು.
ದಕ್ಷ ಆಡಳಿತದಾರ ಹಾಗೂ ಶಿಕ್ಷಣ ತಜ್ಞ ಕೀರ್ತಿಶೇಷ ಡಾ. ಬಿ. ಯಶೋವರ್ಮರ ಪರಿಕಲ್ಪನೆಯಲ್ಲಿ, ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸೋನಿಯಾ ಯಶೋವರ್ಮ ನೇತೃತ್ವದಲ್ಲಿ ನಾಟಕ ಪ್ರದರ್ಶನಗೊಂಡಿತು.
ರಚನೆ ಸದಾನಂದ ಬಿ. ಮುಂಡಾಜೆ, ನಿರ್ದೇಶನ ಮತ್ತು ವಿನ್ಯಾಸ ಯಶವಂತ ಬೆಳ್ತಂಗಡಿ, ಉಜಿರೆಗೆ ಬೇಂದ್ರೆ ಬಂದಾರಂತ, ಎಲ್ಲರೂ ಬರ್ರೀ ಲಘುನಾ ನೋಡಾಕೆ ಹೋಗೂಣ ಅಂತ ಸಾವಿರಾರು ಮಂದಿ ಕುತೂಹಲದಿಂದ ನಾಟಕ ವೀಕ್ಷಿಸಿದರು.
ಜೀವನದಲ್ಲಿ ಬೆಂದ್ರೆ ನೀ ಬೇಂದ್ರೆ ಆಗುವೆ ಎಂದು ಅರ್ಥೈಸಿಕೊಂಡ ಪ್ರೇಕ್ಷಕರು ಪ್ರತಿಭಾನ್ವಿತ ಯುವ ಕಲಾವಿದರ ಪ್ರೌಢ ಅಭಿನಯ, ವಾಕ್ಚಾತುರ್ಯ, ಧಾರವಾಡ ಕನ್ನಡದ ಸೊಗಡು, ಹಾವ_ಭಾವ, ಕಂಡು ಮಂತ್ರಮುಗ್ಧರಾದರು.
ದ.ರಾ. ಬೇಂದ್ರೆ, ನಾಕುತಂತಿ, ಮೂಡಲಮನೆಯ, ಮುತ್ತಿನ ನೀರಿನ ದ.ರಾ. ಬೇಂದ್ರೆಯವರ ಉದಾರ ಮನೋಭಾವ, ದೃಢಸಂಕಲ್ಪ, ಇತ್ಯಾದಿ ಕಂಡು ಎಲ್ಲರೂ ಆಶ್ಚರ್ಯ ಚಕಿತರಾದರು.ಒರಿಯರ್ದ್ ಒರಿ ಅಸಲ್ ಎನ್ನುವಂತೆ ಎಲ್ಲಾ ಕಲಾವಿದರು ಉತ್ತಮ ರೀತಿಯಲ್ಲಿ ನಾಟಕ ಸಾದರ ಪಡಿಸಿದರು.
”ಅಯ್ಯಯ್ಯ ಎಂಚ ಪೊರ್ಲಾಂಡ್” ಎಂದು ಎಲ್ಲರೂ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದರು.