ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೋತ್ಸವದ ಸಂದರ್ಭದಲ್ಲಿ ರವೀಂದ್ರ ಹೆಗ್ಡೆ ಉಚ್ಚೂರು ಮತ್ತು ಸುಧೀರ್ ಕುಮಾರ್ ಹೆಗ್ಡೆ ಕೊಪ್ಪ ಅವರು ಸಾರ್ವಜನಿಕ ಉದ್ದೇಶಕ್ಕಾಗಿ ಕೊಡುಗೆಯಾಗಿ ನೀಡಿದ ಆಂಬುಲೆನ್ಸ್ ವಾಹನವನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು.
ಮರೋಡಿ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಆಂಬುಲೆನ್ಸ್ ವಾಹನವನ್ನು ಉದ್ಘಾಟಿಸಿ, ದಾನಿಗಳು ಉತ್ತಮ ಉದ್ದೇಶದೊಂದಿಗೆ ಸುಮಾರು ₹ 8 ಲಕ್ಷ ವೆಚ್ಚ ಖರ್ಚು ಮಾಡಿ ಆಂಬುಲೆನ್ಸ್ ಅನ್ನು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ.
ತುರ್ತು ಸಂದರ್ಭದಲ್ಲಿ ಜನರು ಇದರ ಸದುಪಯೋಗ ಪಡೆಯಬೇಕು. ಸಾರ್ವಜನಿಕರ ಆರೋಗ್ಯದ ಕಾಳಜಿಯೊಂದಿಗೆ ಈ ಕೊಡುಗೆ ನೀಡಿದ ರವೀಂದ್ರ ಹೆಗ್ಡೆ ಮತ್ತು ಸುಧೀರ್ ಕುಮಾರ್ ಹೆಗ್ಡೆ ಕೊಪ್ಪ ಅವರಿಗೆ ಧನ್ಯವಾದಗಳು ಎಂದು ಹೇಳಿದರು. ದಾನಿ ರವೀಂದ್ರ ಹೆಗ್ಡೆ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಆರೋಗ್ಯದ ತುರ್ತು ಸಂದರ್ಭದಲ್ಲಿ ಸುತ್ತಮುತ್ತಲಿನ ಜನರಿಗೆ ವಾಹನದ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಆಂಬುಲೆನ್ಸ್ ಕೊಡುಗೆ ನೀಡಿದ್ದೇವೆ. ಮನುಷ್ಯನಿಗೆ ಆರೋಗ್ಯ ಮುಖ್ಯ. ಆರೋಗ್ಯವನ್ನು ಯಾರೂ ನಿರ್ಲಕ್ಷ್ಯ ಮಾಡಬಾರದು ಎಂದು ಹೇಳಿದರು.
ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್, ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ ಬುಣ್ಣಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ದಯಾನಂದ ಪೂಜಾರಿ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ವಿಜಯ ಆರಿಗ, ನಾರಾವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉದಯ ಹೆಗ್ಡೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣೇಶ್ ಹೆಗ್ಡೆ, ಮರೋಡಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷೆ ಸೌಮ್ಯಾ, ಮರೋಡಿ ಯೋಜನೆಯ ಸೇವಾ ಪ್ರತಿನಿಧಿಗಳಾದ ಹರಿಣಾಕ್ಷಿ, ಶಶಿಕಲಾ, ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಪೂಜಾರಿ, ಶುಭರಾಜ್ ಹೆಗ್ಡೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಶ್ರೀ ಜೈನ್, ಸದಸ್ಯ ಅಶೋಕ್ ಕೋಟ್ಯಾನ್ ಯಶೋಧರ ಬಂಗೇರ ಮರೋಡಿ ಮತ್ತಿತರರು ಇದ್ದರು.