ಬೆಳ್ತಂಗಡಿ: ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿ, ಬಳಿಕ ಜಾಮೀನು ಪಡೆದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಹೈಯರ್ ನಗರ ಪೊಲೀಸ್ ಠಾಣಾ ಹಿಂಭಾಗದ ವಾಜೀದ್ ಪಾಷಾ (54) ಎಂಬವರು ಪ್ರಕರಣದ ಸಂದರ್ಭದಲ್ಲಿ ಬಂಧಿತನಾಗಿ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು, ಬಳಿಕ ವಿಚಾರಣೆಗೆ ಹಾಜರಾಗದೇ ಸುಮಾರು 8 ವರ್ಷದಿಂದ ತಲೆಮರೆಸಿಕೊಂಡಿದ್ದ.ಊರು ಬಿಟ್ಟು ಬೇರೆ ಕಡೆ ವ್ಯಾಪಾರ ಮಾಡಿಕೊಂಡಿದ ಈತ ಹಾಸನಕ್ಕೆ ಬರುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ಜ.17 ರಂದು ಹಾಸನ ಜಿಲ್ಲೆಯ, ಹೊಳೆನರಸೀಪುರ ತಾಲೂಕಿನ ಲಕ್ಕೂರು ಬಸ್ಸು ತಂಗುದಾಣದ ಬಳಿ ಬಂಧಿಸಿದ್ದಾರೆ.
ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ಹಾಗೂ ಧರ್ಮಸ್ಥಳ ಠಾಣಾ ಸಬ್ ಇನ್ಸ್ ಪೆಕ್ಟರ್ ಅನೀಲ್ ಕುಮಾರ್.ಡಿ.(ಕಾ.ಸು) ಮತ್ತು ಸಬ್ ಇನ್ಸ್ ಪೆಕ್ಟರ್ ಸಮರ್ಥ ಆರ್ ಗಾಣಿಗೆರ್ (ತನಿಖೆ)ರವರ ಮಾರ್ಗದರ್ಶನದಂತೆ ಧರ್ಮಸ್ಥಳ ಠಾಣಾ ಸಿಬ್ಬಂದಿ ರಾಜೇಶ್ ಎನ್, ಗೋವಿಂದ ರಾಜ್, ಮಲ್ಲಿಕಾರ್ಜುನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಆರೋಪಿಯನ್ನು ಬಂಧಿಸಿ, ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ದಂಡ ವಿಧಿಸಿದೆ.