


ಬೆಳ್ತಂಗಡಿ: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಗಮಕ ಕಲಾಪರಿಷತ್ತು ದ.ಕ., ಗಮಕ ಜಿಲ್ಲಾ ಪರಿಷತ್ತು ತಾಲೂಕು ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಶಿಕ್ಷಕ-ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘ ಇವರ ಆಶ್ರಯದಲ್ಲಿ ಜ.20 ರಂದು ಬೆಳ್ತಂಗಡಿ ತಾಲೂಕು ಎರಡನೇ ಗಮಕ ಸಮ್ಮೇಳನ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಜರುಗಲಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ಹೇಳಿದರು. ಅವರು ಜ.15ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹಿರಿಯ ಗಮಕಿ ಜಯರಾಮ ಕುದ್ರೆತ್ತಾಯ ಧರ್ಮಸ್ಥಳ ಇವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ಸಂಪನ್ನಗೊಳ್ಳಲಿದೆ.
ಈಗಾಗಲೇ ಸಮ್ಮೇಳನದ ಪೂರ್ವ ತಯಾರಿಯೂ ಬೆಳಾಲಿನ ಪ್ರೌಢಶಾಲೆಯ ಪೋಷಕರು, ಹಳೆ ವಿದ್ಯಾರ್ಥಿಗಳು, ಬೆಳಾಲು ಗ್ರಾಮ ಪಂಚಾಯತ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಶ್ರೀ ಮಾಯ ಮಹಾದೇವ ದೇವಸ್ಥಾನ ಬೆಳಾಲು, ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಕೊಲ್ಪಾಡಿ, ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ ಬೆಳಾಲು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ರಿ ಬೆಳಾಲು, ಇವರೆಲ್ಲರನ್ನು ಒಗ್ಗೂಡಿಸಿಕೊಂಡು ವಿವಿಧ ಜವಾಬ್ದಾರಿಗಳನ್ನು ಹಂಚಿಕೊಂಡು ಸಮ್ಮೇಳನದ ಯಶಸ್ವಿಗಾಗಿ ತಯಾರಿ ನಡೆಸಲಾಗುತ್ತಿದೆ.
ಉಜಿರೆ ಶ್ರೀ ಧ.ಮಂ.ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ.ಎಸ್ ಸತೀಶ್ಚಂದ್ರ ಉದ್ಘಾಟಿಸಲಿದ್ದಾರೆ.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್, ಬೆಳಾಲು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮತ್ತು ಮಾಯಾ ಶ್ರೀ ಮಹಾದೇವ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪದ್ಮ ಗೌಡ ಎಚ್., ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಭಾಗವಹಿಸಲಿದ್ದಾರೆ.


ತಾಲೂಕಿನ ಹಿರಿಯ ಗಮಕಿ ಮನೋರಮಾ ತೋಳ್ಪಾಡಿತ್ತಾಯ ಮತ್ತು ಪ್ರವಚನಕಾರ ಪಿ.ಲಕ್ಷ್ಮಣಗೌಡ ಬೆಳಾಲು ಇವರಿಗೆ ಸನ್ಮಾನ ನಡೆಯಲಿದೆ.
ಸಮ್ಮೇಳನವು ಹಳೆಗನ್ನಡ ಮತ್ತು ನಡುಗನ್ನಡ ಕಾವ್ಯ ಪರಂಪರೆಯ ಆಧಾರಿತವಾಗಿದ್ದು ಶೈಕ್ಷಣಿಕ ಮೌಲ್ಯಗಳಿಗೆ ಕೇಂದ್ರೀಕರಿಸಲ್ಪಟ್ಟಿದೆ.ಸಂವಾದ ಗೋಷ್ಠಿಯು ಗಮಕ ಯಕ್ಷಗಾನ-ಶಿಕ್ಷಣ, ಗೋಷ್ಠಿಗಳೆಲ್ಲವೂ ಶೈಕ್ಷಣಿಕ ಭಾಗವಾಗಿರುವ ಕಾವ್ಯ ಭಾಗಗಳ ಗಮಕ ವಾಚನ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.ಪಂಪ, ರನ್ನ, ರಾಘವಾಂಕ, ಕುಮಾರವ್ಯಾಸ, ಬಸವಣ್ಣ, ಡಿವಿಜಿ, ಸೋಮೇಶ್ವರ ಮೊದಲಾದ ಕನ್ನಡದ ಮಹಾನ್ ಕವಿಗಳ ಕಾವ್ಯ ಭಾಗಗಳ ವಾಚನದ ವೈಭವ, ನೃತ್ಯ ರೂಪಕಗಳನ್ನು ಸಂಯೋಜಿಸಲಾಗಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಗಣಪತಿ ಭಟ್ ಕುಳಮರ್ವ, ಅಶೋಕ್ ಭಟ್ ಉಜಿರೆ, ಡಾ.ದಿವ ಕೊಕ್ಕಡ, ಪರಿಮಳ, ಡಾ.ಟಿ.ಕೃಷ್ಣಮೂರ್ತಿ ಉಜಿರೆ, ನಾರಾಯಣ ಸುವರ್ಣ ಮಂಜನೊಟ್ಟು, ದಿವಾಕರ ಆಚಾರ್ಯ ಧರ್ಮಸ್ಥಳ, ಮಧೂರು ವಿಷ್ಣು ಪ್ರಸಾದ್ ಕಲ್ಲೂರಾಯ, ಎ.ಡಿ.ಸುರೇಶ್ ಬೆಳ್ತಂಗಡಿ, ರವೀಂದ್ರ ಶೆಟ್ಟಿ ಬಳಂಜ, ದಾಮೋದರ ಗೌಡ ಸುರುಳಿ, ವಿದ್ಯಾರ್ಥಿ ಗಮಕಿಗಳಾದ ಶ್ರೀವಿದ್ಯಾ ಐತಾಳ್ ಉಜಿರೆ, ಭಾರವಿ ಭಟ್ ಬೆಳಾಲು, ನಂದನಾ ಮಾಲೆಂಕಿ, ಮಂಗಳಗೌರಿ ಬಾಸಮೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯರ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ.ಸಮಾರೋಪ ಭಾಷಣವನ್ನು ವಿದ್ವಾಂಸ ಉಜಿರೆ ಡಾ.ಶ್ರೀಧರ ಭಟ್ ನಡೆಸಿಕೊಡಲಿದ್ದಾರೆ. ಹಿರಿಯ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ, ವಿದ್ವಾಂಸ ರಾಜಾರಾಮ ಶರ್ಮ ಬೆಳಾಲು, ಶ್ರೀಶ ಮುಚ್ಚಿನ್ನಾಯ ಭಾಗವಹಿಸಲಿದ್ದಾರೆ.
ಕನ್ನಡ ಕಾವ್ಯ ಪರಂಪರೆಯಲ್ಲಿ ಹಳೆಗನ್ನಡ ನಡುಗನ್ನಡ ಸಾಹಿತ್ಯವು ಭಾರತೀಯ ಸಾಂಸ್ಕೃತಿಕ ಮತ್ತು ಜೀವನ ಮೌಲ್ಯಗಳಿಗೆ ವಿಶೇಷ ಸ್ಥಾನವನ್ನು ಕಲ್ಪಿಸಿದೆ.ಇಂತಹ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಮಕ ಕಲೆಯನ್ನು ಪ್ರಚುರ ಪಡಿಸುವುದು ಮತ್ತು ಗಮಕ ಕಲಾ ಪ್ರಯೋಗದೊಂದಿಗೆ ಶೈಕ್ಷಣಿಕವಾಗಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸುವುದು ಸಮ್ಮೇಳನದ ಉದ್ದೇಶವಾಗಿದೆ.ಇದಕ್ಕಾಗಿ ಬೆಳಾಲು ಜನತೆ ಸಮ್ಮೇಳನದ ಯಶಸ್ಸಿನಲ್ಲಿ ತೊಡಗಿಕೊಂಡಿದೆ.ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಮ್ಮೇಳನದ ರೂಪುರೇಶೆಗಳನ್ನು ಸಿದ್ಧಪಡಿಸಲಾಗಿದೆ.ಶ್ರೀ ಧ.ಮಂ ಪ್ರೌಢಶಾಲೆಯ ಶಿಕ್ಷಕ, ಸಿಬ್ಬಂದಿಗಳೆಲ್ಲರ ಕ್ರಿಯಾಶೀಲತೆ, ಪೋಷಕರ ಮತ್ತು ಹಳೆ ವಿದ್ಯಾರ್ಥಿಗಳ ತೊಡಗಿಸಿ ಕೊಳ್ಳುವಿಕೆಯಲ್ಲಿ ಒಟ್ಟು ಕಾರ್ಯಕ್ರಮಗಳ ವ್ಯವಸ್ಥೆ ಸಿದ್ಧವಾಗುತ್ತಿದೆ. ಸುಮಾರು 200 ಮಂದಿಯ ನಿರೀಕ್ಷೆಯಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ.ವಿದ್ಯಾರ್ಥಿಗಳಿಗೆ ಕಾವ್ಯವಾಚನ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೆಚ್ಚು ತೊಡಗಿಸಿಕೊಳ್ಳಲು ಶಿಕ್ಷಣ ಇಲಾಖೆಯವರ ಸಹಕಾರವನ್ನು ಕೇಳಿಕೊಳ್ಳಲಾಗಿದೆ ಎಂದು ಅಧ್ಯಕ್ಷರು ಹೇಳಿದರು.
ಜಿಲ್ಲಾ ಗಮಕಲಾ ಪರಿಷತ್ತಿನ ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯ, ಬೆಳಾಲು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ, ಸದಸ್ಯ ಶ್ರೀನಿವಾಸ ತಂತ್ರಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.








