ಬೆಳ್ತಂಗಡಿ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಕಟಿಬದ್ಧವಾಗಿದ್ದು, ಮಕ್ಕಳ ಹಿತರಕ್ಷಣೆಗೆ ಪ್ರತಿಯೊಬ್ಬರೂ ಮಹತ್ವ ನೀಡಬೇಕೆಂದು ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಹೇಳಿದರು.
ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು, ಚಾರ್ಮಾಡಿ ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಬೆಳ್ತಂಗಡಿ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಹಾಗೂ ಸಂಸಾರ ಜೋಡುಮಾರ್ಗದ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಪ್ರಚಾರದ ಅಂಗವಾಗಿ ಜ.12ರಂದು ಏರ್ಪಡಿಸಲಾದ ಮಕ್ಕಳ ಹಕ್ಕುಗಳ ಜಾಗೃತಿ ಅಭಿಯಾನಕ್ಕೆ ಕಕ್ಕಿಂಜೆ ಅಣಿಯೂರು ಶಾಲೆಯ ಆವರಣದಲ್ಲಿ ಬ್ಯಾಂಡ್ ಬಾರಿಸುವ ಮೂಲಕ ಚಾಲನೆ ನೀಡಿದ ಅವರು ಗ್ರಾಮ ಪಂಚಾಯತ್ ವತಿಯಿಂದ ಆರಂಭಗೊಂಡ ಕೂಸಿನ ಮನೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯ ಆವರಣದಲ್ಲಿ ಆರಂಭಗೊಂಡ ಜಾಥಾವು ಗ್ರಾಮ ಪಂಚಾಯತ್ ವರೆಗೆ ಸಾಗಿ, ಮರಳಿ ಶಾಲೆವರೆಗೆ ಸಾಗಿ ಸಮಾಪನಗೊಂಡಿತು.ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಯೋಜಕ ಚಂದ್ರಮೌಳಿಯವರು ಜಾಥಾದ ಆರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮಕ್ಕಳ ಹಕ್ಕುಗಳ ಬಗ್ಗೆ ಎಲ್ಲರಿಗೂ ಮನದಟ್ಟಾಗಬೇಕು ಎನ್ನುವ ಉದ್ಧೇಶದಿಂದ ಈ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನೀಲು, ಮಾಜಿ ತಾ.ಪಂ.ಸದಸ್ಯ ಕೊರಗಪ್ಪ ಗೌಡ, ತಾ.ಪಂ.ಐಇಸಿ ಸಂಯೋಜಕಿ ವಿನಿಶಾ, ಬೆಳ್ತಂಗಡಿ ರೋಟರಿ ಕ್ಲಬ್ ಪದಾಧಿಕಾರಿ ಪ್ರಕಾಶ್ ನಾರಾಯಣ ರಾವ್, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷೆ ನಯನಾ ರೈ, ಸಂಸಾರ ಜೋಡುಮಾರ್ಗದ ನಿರ್ದೇಶಕ ಮೌನೇಶ ವಿಶ್ವಕರ್ಮ, ಗ್ರಾ.ಪಂ.ಕಾರ್ಯದರ್ಶಿ ಕುಂಞಿ ಕೆ, ಶಾಲೆಯ ಮುಖ್ಯ ಶಿಕ್ಷಕಿ ಲೀನಾ ರೀಟಾ ಮೋರೆಸ್, ಶಾಲಾ ಶಿಕ್ಷಕರಾದ ಮಂಜು ನಾಯ್ಕ ಮತ್ತು ರಮ್ಯ, ಮೊದಲಾದವರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಸಿಂಧು ಸ್ವಾಗತಿಸಿದರು.ಸಂಜೀವಿನೀ ಒಕ್ಕೂಟದ ಎಂ.ಬಿ.ಕೆ.ಭವ್ಯ ಕಾರ್ಯಕ್ರಮ ನಿರ್ವಹಿಸಿದರು.ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್ ವಂದಿಸಿದರು.
ಕೇಳಿ ಬಂತು ಘೋಷಣೆಗಳು: ಶಾಲಾ ಬ್ಯಾಂಡ್ ಬಳಗದ ಜೊತೆ ಜಾಥಾದಲ್ಲಿ ಭಾಗವಹಿಸಿದ್ದ ಮಕ್ಕಳು “ಮಕ್ಕಳ ಹಕ್ಕುಗಳ ಕುರಿತಾಗಿ ಕೂಗಿದ ಘೋಷಣೆಗಳು” ಗ್ರಾಮಸ್ಥರ ಹೊಸ ಅರಿವಿಗೆ ಕಾರಣವಾಯಿತು.
ಇಂದಿನ ಮಕ್ಕಳು ಇಂದಿನ ಪ್ರಜೆಗಳು, ಮಕ್ಕಳ ಗ್ರಾಮಸಭೆ ನಮ್ಮ ಗ್ರಾಮಸಭೆ, ಬದುಕುವ ಹಕ್ಕು-ನಮ್ಮ ಹಕ್ಕು, ರಕ್ಷಣೆಯ ಹಕ್ಕು-ನಮ್ಮ ಹಕ್ಕು, ಶಿಕ್ಷಣ ಹಕ್ಕು -ನಮ್ಮ ಹಕ್ಕು, ಭಾಗವಹಿಸುವ ಹಕ್ಕು-ನಮ್ಮ ಹಕ್ಕು ಮೊದಲಾದ ಘೋಷಣೆಗಳು ಜಾಥಾದುದ್ದಕ್ಕೂ ಗಮನಸೆಳೆಯಿತು.ಜಾಥಾದಲ್ಲಿ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು,ಶಾಲಾಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಶಿಕ್ಷಣಪ್ರೇಮಿಗಳು ಜೊತೆಯಾಗಿ ಹೆಜ್ಜೆಹಾಕಿದ್ದು ವಿಶೇಷವಾಗಿತ್ತು.