ಶಿರ್ಲಾಲು: ‘ಸದಾ ಸತ್ ಚಿಂತನೆಯಲ್ಲಿ ತೊಡಗಿ, ಕಾಯಕದಲ್ಲಿ ತೊಡಗಿದರೆ ದೇವರ ಸಾನ್ನಿಧ್ಯದಲ್ಲಿ ಇದ್ದಂತೆ ಆಗುತ್ತದೆ.ಎಲ್ಲರ ಒಳಿತು ಬಯಸಿ ಪರಿಶುದ್ಧ ಜೀವನ ನಡೆಸಿದರೆ ಬದುಕು ಸಾರ್ಥಕಗೊಳ್ಳುತ್ತದೆ.ಹಾಗಾಗಿ ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ, ಸಮ್ಯಕ್ ಚಾರಿತ್ರ್ಯ ನಾವು ಬೆಳೆಸಿಕೊಳ್ಳಬೇಕು.ಇದರಿಂದ ಧರ್ಮ ಉಳಿಯಲು ಸಾಧ್ಯವಾಗುತ್ತದೆ’ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ್ ಅಜಿಲ ಹೇಳಿದರು.
ಅವರು ಡಿ.25ರಂದು ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
‘ದೇವಸ್ಥಾನ ಮತ್ತು ಬ್ರಹ್ಮಕಲಶ ಯಾವ ರೀತಿ ಮಾಡಬಹುದು ಎಂಬುದಕ್ಕೆ ಶಿರ್ಲಾಲು ದೇವಸ್ಥಾನದ ಕೆಲಸ ಕಾರ್ಯಗಳೇ ಸಾಕ್ಷಿಯಾಗಿದೆ.ಇಲ್ಲಿಯ ಸ್ವಯಂ ಸೇವಕರ ಸೇವಾ ನಿಷ್ಠೆ ವಿಶೇಷವಾದುದು’ ಎಂದರು.
ವಾಗ್ಮಿ ಹಾರಿಕಾ ಮಂಜುನಾಥ್ ಧಾರ್ಮಿಕ ಉಪನ್ಯಾಸ ನೀಡಿ ‘ದೇವಸ್ಥಾನದಲ್ಲಿ ನಿತ್ಯ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಅದು ದೈವಿಕ ಭದ್ರತೆಯನ್ನು ನೀಡಿದಂತೆ. ಊರಿನಲ್ಲಿ ದೇವಸ್ಥಾನ ಮುರಿದಿದೆ ಎಂದರೆ ಆ ಊರಿನಲ್ಲಿ ನಾಗರಿಕರು ಕಡಿಮೆ ಆಗಿದ್ದಾರೆ ಎಂದರ್ಥ. ಹಾಗಾಗಿ ದೇವಸ್ಥಾನ ಕಳೆಗುಂದುವುದಕ್ಕೆ ನಾಗರಿಕರು ಅವಕಾಶ ನೀಡಬಾರದು’ ಎಂದರು.
ಪುತ್ತೂರು ಯಮುನಾ ಬೋರ್ ವೆಲ್ಸ್ ನ ಕಾವ್ಯ ಕೃಷ್ಣ ಶೆಟ್ಟಿ, ಶಿರ್ಲಾಲು ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ವಿಶ್ವನಾಥ ಸಾಲಿಯಾನ್ ಪುದ್ದರಬೈಲು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಟೀಲು ನಿಡ್ಯೋಡಿ ಜ್ಞಾನರತ್ನ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ ಗೌಡ ದೇವಸ್ಯ, ಕುದ್ರೋಳಿ ಮುದ್ರಾ ಪ್ರಿಂಟರ್ಸ್ ನ ಕೇಶವ ಬರಮೇಲು, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಜಯಶೀಲ ಕುಶಾಲಪ್ಪ ಗೌಡ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಪಾರೆಂಕಿ, ಸೇವಾ ಸಮಿತಿ ಅಧ್ಯಕ್ಷ ಆನಂದ ಸಾಲಿಯಾನ್ ಒಡಿಮಾರ್, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಸೋಮನಾಥ ಬಳ್ಳಿದಡ್ಡ, ಫಲ್ಗುಣಿ ಮಹಿಳಾ ಮಂಡಳಿ ಅಧ್ಯಕ್ಷೆ ಜಯಂತಿ ಇದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವಿರಾಜ್ ಕುಲ್ಯರೊಟ್ಟು ಸ್ವಾಗತಿಸಿದರು. ಸಮೀಕ್ಷಾ ಬಾರ್ಲೋಡಿ ನಿರೂಪಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯದರ್ಶಿ ಕುಶಾಲಪ್ಪ ಗೌಡ ಕಲಂದಡ್ಡ ವಂದಿಸಿದರು.