ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪರೀಕ ಸೌಖ್ಯವನದಲ್ಲಿ ಡಿ.22ರಂದು ಕ್ಷೇಮಹಾಲ್ನಲ್ಲಿ ಜರಗಿದ ಸೌಖ್ಯ ಸಾಹಿತ್ಯಧಾರೆಯು ಕನ್ನಡದ ಖ್ಯಾತ ಕವಿ, ಸಾಹಿತಿ ಹಾಗೂ ಕನ್ನಡ ಚಲನಚಿತ್ರರಂಗದ ಮುಂಗಾರು ಮಳೆ ಖ್ಯಾತಿಯ ಹೆಸರಾಂತ ಗೀತಾ ರಚನೆಕಾರರು ಆಗಿರುವ ಡಾ|ಜಯಂತ್ ಗೌರೀಶ ಕಾಯ್ಕಿಣಿ ಇವರಿಂದ ಜರಗಿತು.
ಇದರ ಮೊದಲು ಜರಗಿದ ಸಭಾಕಾರ್ಯಕ್ರಮದಲ್ಲಿ ಕಾಯ್ಕಿಣಿಯವರು ಮಾತನಾಡಿ ತಾನು ಇಷ್ಟರವರೆಗೆ 500ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿದ್ದು ಮುಂಗಾರು ಮಳೆಯ ಸಾಹಿತ್ಯವು ನನಗೆ ಹೆಸರನ್ನು ತಂದು ಕೊಟ್ಟಿರುವುದರ ಜೊತೆಗೆ ಸಮಾಜದಲ್ಲಿ ನಾನು ಗುರುತಿಸಿಕೊಳ್ಳುವಂತಾಯಿತು ಎನ್ನುತ್ತಾ ಸಮಾಜದಲ್ಲಿ ಎಲ್ಲರು ಸಹಮತ, ಸಹಬಾಳ್ವೆ ಮತ್ತು ಸಮಾನತೆಯೊಂದಿಗೆ ಬದುಕಬೇಕೆಂದು ಹಾರೈಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|ವೀರೇಂದ್ರ ಹೆಗ್ಗಡೆಯವರು ನಡೆಸಿಕೊಂಡು ಬರುತ್ತಿರುವ ಸಮಾಜಮುಖಿ ಕೆಲಸಗಳು ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳು ಇನ್ನಷ್ಟು ಹೆಸರುವಾಸಿಯಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ ಸೀತಾರಾಮ ತೋಳ್ಪಾಡಿತ್ತಾಯ ಇವರು ಸಂಸ್ಥೆಯ ವತಿಯಿಂದ ಡಾ| ಜಯಂತ್ ಕಾಯ್ಕಿಣಿಯವರನ್ನು ಸನ್ಮಾನಿಸಿ ಗೌರವಿಸಿದರು.
ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ|| ಗೋಪಾಲ ಪೂಜಾರಿಯವರು ಉಪಸ್ಥಿತರಿದ್ದರು.ಡಾ||ಕಾಯ್ಕಿಣಿಯವರ ಬಗ್ಗೆ ಆಸ್ಪತ್ರೆಯ ಕವಯತ್ರಿ ಅರುಣ ಹೆಬ್ರಿ ಇವರು ಬರೆದಿರುವ ಕವನ ಸಾಹಿತ್ಯ ಸಮ್ಮಾನ ಪತ್ರವನ್ನು ಡಾ|| ನವ್ಯತಾ ಬಲ್ಲಾಳ್ ಇವರು ವಾಚಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಪ್ರಸ್ತಾವಣೆಯೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಡಾ|| ಶೋಭಿತ್ ಶೆಟ್ಟಿ ಇವರು ವಂದನಾರ್ಪಣೆಗೈದರು.