ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತ- ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ

0

ಧರ್ಮಸ್ಥಳ: ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಜರುಗಿದ ಲಕ್ಷ ದೀಪೋತ್ಸವದ ಪ್ರಥಮ ದಿನ ಡಿ.8ರಂದು ರಾತ್ರಿ ಹೊಸಕಟ್ಟೆ ಉತ್ಸವವು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಜರುಗಿತು.

ಶ್ರೀ ಮಂಜುನಾಥ ಸ್ವಾಮಿಗೆ ಗುಡಿಯೊಳಗೆ ವಿಶೇಷ ಪೂಜೆಗಳು, ದೇಗುಲದಆವರಣದಲ್ಲಿ ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು ಸೇರಿ ಸರ್ವವಾದ್ಯಗಳೊಂದಿಗೆ ೧೬ ಸುತ್ತುಗಳಲ್ಲಿ ಶ್ರೀ ಸ್ವಾಮಿಯಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಕೂರಿಸಲಾಯಿತು.

ಪಲ್ಲಕ್ಕಿಗೆ ಆರತಿಯನ್ನು ಬೆಳಗುವುದರೊಂದಿಗೆ ಮೆರವಣಿಗೆ ಆರಂಭವಾಯಿತು. ತಮಟೆ ವಾದ್ಯ, ಜಾಗಟೆ, ದೀವಟಿಗೆ ಮತ್ತು ನೃತ್ಯಮಾಡುವ ಬೊಂಬೆ ವೇಷಧಾರಿಗಳೊಂದಿಗೆ ಹೊರಟ ಮೆರವಣಿಗೆ ದೇಗುಲದ ಎದುರಿನಲ್ಲಿರುವ ವಸಂತ ಮಹಲಿನ ಹೊಸಕಟ್ಟೆಗೆ ತಲುಪಿತು. ದೇವರಿಗೆ ಅಷ್ಟಸೇವೆಯನ್ನು ಖಾವಂದರ ಸಮ್ಮುಖದಲ್ಲಿ ನಡೆಸಲಾಯಿತು. ಚತುರ್ವೇದಗಳ ಪಠಣ, ಸಂಗೀತ, ಮೌರಿ, ನೃತ್ಯ ಮತ್ತು ಸರ್ವವಾದ್ಯಗಳನ್ನು ಒಳಗೊಂಡ ಅಷ್ಟಸೇವೆಯೊಂದಿಗೆ ಪೂಜೆ ಸಂಪನ್ನವಾಯಿತು.

ವಸಂತಮಹಲಿನಲ್ಲಿ ಪೂಜೆ ನೆರವೇರಿದ ಬಳಿಕ ಬೆಳ್ಳಿ ರಥದಲ್ಲಿದೇವರ ಮೂರ್ತಿಯನ್ನು ವಿರಾಜಮಾನಗೊಳಿಸಿ, ಆರತಿ ಬೆಳಗಿ, ಭಕ್ತರ ಸಮ್ಮುಖದಲ್ಲಿ ದೇವಳಕ್ಕೆ ಒಂದು ಸುತ್ತು ರಥವನ್ನು ಎಳೆದು ಬಂದುದೇವರ ಮೂರ್ತಿಗೆ ಮಂಗಳಾರತಿ ಬೆಳಗಿ ಮೂರ್ತಿಯನ್ನು ಯಥಾರೀತಿಯಲ್ಲಿ ದೇಗುಲದೊಳಗೆ ಕರೆತರಲಾಯಿತು.

ದೇವಳದಿಂದ ಉತ್ಸವ ಮೂರ್ತಿಯ ಮೆರವಣಿಗೆ ಆರಂಭವಾದಾಗ, ವಸಂತ ಮಹಲಿನ ಆವರಣವನ್ನು ದೀಪಗಳಿಂದ ಅಲಂಕರಿಸಲಾಯಿತು. ಸತತ ಎಂಟು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಆಲಯದ ಈ ಸಂಪ್ರದಾಯ ಈ ವರ್ಷವೂ ಕೂಡ ವಿಜೃಂಭಣೆಯಿಂದ ನೆರವೇರಿತು.ನೆರೆದಿದ್ದ ಭಕ್ತವೃಂದವೆಲ್ಲ ಉತ್ಸವ ಮೂರ್ತಿಯ ದರುಶನವನ್ನು ಪಡೆದು ಕೃತಾರ್ಥರಾದರು.

p>

LEAVE A REPLY

Please enter your comment!
Please enter your name here