ಮುಂಡಾಜೆ ಕ್ರೈಸ್ಟ್ ಅಕಾಡಮಿಯಲ್ಲಿ ಐಸಿಎಸ್‌ಇ ಮಾನ್ಯತೆ ಘೋಷಣೆ ಕಾರ್ಯಕ್ರಮ-“ಧ್ವನಿ 2023” ಪ್ರತಿಭಾ ದಿನ-ವಿದ್ಯೆಗಿಂತ ಜ್ಞಾನ ಮುಖ್ಯ: ವಂ.ಬಿಷಪ್ ಲಾರೆನ್ಸ್ ಮುಕ್ಕುಯಿ

0

ಬೆಳ್ತಂಗಡಿ: ವಿದ್ಯೆಗಿಂತ ಜ್ಞಾನ ಮುಖ್ಯ.ವಿದ್ಯಾವಂತ ಭಯೋತ್ಪಾದಕನಾಗಬಹುದು. ಆದರೆ ಜ್ಞಾನವಂತನಿಂದ ವಿಶ್ವಕ್ಕೆ ಪ್ರಯೋಜನವಾಗುತ್ತದೆ‌. ಅವರಿಂದ ಪ್ರಪಂಚ ಸುರಕ್ಷತೆ ಪಡೆಯುತ್ತದೆ ಎಂದು ಬೈಬಲ್ ವಾಣಿ ಇದೆ. ಜೀವನ ಎಂದರೆ ಅದ್ಭುತ ಕಲೆ. ಇಲ್ಲಿ ಯಶಸ್ಸು ಸಾಧಿಸಲು ಸವಾಲು, ಗೆಲವು, ಪರಾಭವ, ಸಂತೋಷ ದುಃಖ, ಸಂಪತ್ತು ದಾರಿದ್ರ್ಯ ಎಲ್ಲವೂ ಇರುತ್ತದೆ.ಇಲ್ಲಿನ ಸವಾಲುಗಳನ್ನು ಎದುರಿಸಿ ಇತರರಿಗೆ ಒಳ್ಳೆದು ಮಾಡುತ್ತಾನೋ ಆಗ ಮಾತ್ರ ಜ್ಞಾನಕ್ಕೆ ಬೆಲೆ ಬರುತ್ತದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.

ಕ್ರೈಸ್ಟ್ ಅಕಾಡಮಿ ಮುಂಡಾಜೆ ಇಲ್ಲಿ ನ.4 ರಂದು ನಡೆದ, ಶಿಕ್ಷಣ ಸಂಸ್ಥೆಗೆ ಐಸಿಎಸ್‌ಇ ಮಾನ್ಯತೆ ದೊರೆತಿರುವುದರ ಘೋಷಣೆ ಮತ್ತು ಮಕ್ಕಳ ಪ್ರತಿಭಾ ಸಂಗಮ “ಧ್ವನಿ -2023” ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.

ಗ್ರಾಮೀಣ‌ ಭಾಗದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಶಿಕ್ಷಣ ನೀಡಲು ಸಂಸ್ಥೆ ತೆರೆದಿರುವ ಸಿಎಮ್‌ಐ ಧರ್ಮಗುರುಗಳು ಅಭಿನಂದನೆಗೆ ಅರ್ಹರು. ಈ ಮಾನ್ಯತೆಯ ಅಂತಸತ್ವ ತಿಳಿದು ಹೆತ್ತವರು ಸಂಸ್ಥೆಯ ಜೊತೆಯ ಜೊತೆ ಸ್ಪಂದಿಸಬೇಕು. ಒತ್ತಡಗಳಿಂದಲೇ ಕೂಡಿರುವ ಸಮಾಜದಲ್ಲಿ ಸಾಂತ್ವಾನ‌ಹೇಳುವ ಮನೋಭೂಮಿಕೆ ಬೆಳೆಯಬೇಕು ಎಂದವರು ಹೇಳಿದರು.

ಐಸಿಎಸ್‌ಇ ಮಾನ್ಯತೆಯನ್ನು ಘೋಷಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಗ್ರಾಮಾಂತರ ಭಾಗದಲ್ಲಿ ಈ ದರ್ಜೆಯ ಸಂಸ್ಥೆ ಕಟ್ಟಲು ಧೈರ್ಯ ತೋರಿರುವುದಕ್ಕೆ ಧರ್ಮಗುರುಗಳ ಬಳಗಕ್ಕೆ ಅಭಿನಂದನೆ ಸಲ್ಲಬೇಕು.

ಶಿಕ್ಷಣ ಸಂಸ್ಥೆಗಳಲ್ಲಿ ಅಂಬೇಡ್ಕರ್, ವಿವೇಕಾನಂದ, ಮದರ್ ತೆರೇಸರಂತಹಾ ವ್ಯಕ್ತಿತ್ವಗಳು‌ ನಿರ್ಮಾಣವಾಗಬೇಕು. ನಾಳೆ ಸಮಾಜದಲ್ಲಿ ಉನ್ನತ ಸ್ಥರದಲ್ಲಿರುವ ವಿದ್ಯಾರ್ಥಿಗಳ ಎಲ್ಲಿಂದ ಬಂದಿದ್ದಾರೆ ಎಂದರೆ ಅದು ಇಲ್ಲಿಂದ ಎಂಬ ಕೀರ್ತಿ ಬರಬೇಕು. ಮಂಗಳೂರು ನಗರಕ್ಕೆ ಒಂದು ಗಂಟೆಯಲ್ಲಿ ಪದರಯಾಣ ಮಾಡಬಹುದಾದ ಸಂಪರ್ಕ‌ ರಸ್ತೆಗಳು ಇಲ್ಲಿ ನಿರ್ಮಾಣವಾಗುತ್ತಿರುವುದಿಂದ ಇಲ್ಲಿ ಮುಂದಕ್ಕೆ ಪದವಿವರೆಗಿನ ಶಿಕ್ಷಣ ಕೇಂದ್ರಗಳು ಬರುವ ವಿಶ್ವಾಸವಿದೆ. ಜನಪ್ರತಿನಿಧಿಯಾಗಿ ಇದಕ್ಕೆ ನನ್ನ ಪೂರ್ಣ ಬೆಂಬಲವೂ ಇದೆ. ಶಿಸ್ತು ಬದ್ಧವಾದ ಈ‌ ಸಂಸ್ಥೆಯಿಂದ ನಾಳೆ ಸಮಾಜಕ್ಕೆ ಒಬ್ಬ ಒಳ್ಳೆಯ ಪ್ರಜೆಯ ಸಮರ್ಪಣೆಯಾಗಲಿ ಎಂದು ಆಶಿಸುತ್ತೇನೆ ಎಂದರು.

ಮುಖ್ಯ ಅತಿಥಿಯಾಗಿದ್ದ ಸಯ್ಯಿದ್ ಕಾಜೂರು ತಂಙಳ್ ಮಾತನಾಡಿ, ಮನುಷ್ಯನಿಗೆ ಜೀವಿಸಲು ವಾಯು, ಅಗ್ನಿ, ಆಹಾರ ಹೇಗೆ ಮುಖ್ಯವೋ ವಿದ್ಯೆಯೂ ಅಷ್ಟೇ ಮುಖ್ಯ. ವಿದ್ಯಾವಂತರಿಗಿಂತ ಉಪಕಾರಪ್ರದವಾದ ಜ್ಞಾನಿಗಳ ಸೃಷ್ಟಿ ಅಗತ್ಯ. ವಿಜ್ಞಾನ, ಜ್ಞಾನ ಮತ್ತು ಆತ್ಮಜ್ಞಾನವಿರುವ ವಿದ್ಯಾಭ್ಯಾಸ ವಿಜಯದ ಕೀಲಿಕೈ. ಐಸಿಎಸ್‌ಇ ಪಠ್ಯ ಕ್ರಮ ಅಧ್ಯಯನದ ಈ ಸಂಸ್ಥೆಯು‌ ಈ ಭಾಗದ ಜನರಿಗೆ ಒಳ್ಳೆಯ ಅವಕಾಶ ನೀಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸೈಂಟ್ ಥೋಮಸ್ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ಫಾ.ಡಾ.ಆಗಸ್ಟಿ ಪಿ.ಎ ಮಾತನಾಡಿ, ಕುಟುಂಬ ಎಂದರೆ ಅದೊಂದು ವಿಶ್ಬ ವಿದ್ಯಾನಿಲಯ. ಹೆತ್ತವರೇ ಅದರ ಶಿಕ್ಷಕರು ಎಂಬ ಮಾತು ಮಹಾತ್ಮಾ ಗಾಂಧಿಯವರು ಹೇಳಿದ್ದಾರೆ. ಐಸಿಎಸ್‌ಇ ಈ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಒಳ್ಳೆಯ ನಾಯಕರಾಗಿ ಹೊರಹೊಮ್ಮಲಿದ್ದಾರೆ‌. ಬುದ್ದಿಮತ್ತೆಯನ್ನು ವೃದ್ದಿಸುವ ಈ ಸಂಸ್ಥೆಯನ್ನು ಆಯ್ಕೆ ಮಾಡಿದ ಹೆತ್ತವರು ಭವಿಷ್ಯದಲ್ಲಿ ಸಂತೋಷ, ಯಶಸ್ಸು ಗಳಿಸುತ್ತೀರಿ. ನಿಮ್ಮ ಆಯ್ಕೆಗಾಗಿ ಹೆತ್ತವರನ್ನು ಅಭಿನಂದಿಸುತ್ತೇನೆ ಎಂದರು.

ಸಂಸ್ಥೆಯ ಪ್ರಾಂಶುಪಾಲ ಫಾ. ಮ್ಯಾಥ್ಯೂ ಸಿಎಮ್‌ಐ ಸ್ವಾಗತಿಸಿ ಪ್ರಸ್ತಾವನೆಗೈದರು.

ಶಿಕ್ಷಕಿಯರಾದ ಭವ್ಯಾ ರೈ ಮತ್ತು ಪ್ರಜ್ಞಾ ನಿರೂಪಿಸಿದರು. ಜೆಸ್ಸಿ ಸೆಬಾಸ್ಟಿಯನ್ ವರದಿ ವಾಚಿಸಿದರು. ಅರ್ಚನಾ ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಮತ್ತು ಬಹುಮಾನ ವಿತರಣೆ ನಡೆಯಿತು.

ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿದ್ದ ಅಡೂರು ಗೋಪಾಲಕೃಷ್ಣ ರಾವ್, ಗ್ರಾ.ಪಂ ಅಧ್ಯಕ್ಷ ಗಣೇಶ್ ಬಂಗೇರ, ಕೆಎಸ್‌ಎಮ್‌ಸಿಎ ಪಿಆರ್‌ಒ ಪಿ.ಸಿ‌ ಸೆಬಾಸ್ಟಿಯನ್, ರೋಟರಿ ಕ್ಲಬ್ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ನಿವೃತ್ತ ಮೇಜರ್ ಜನರಲ್ ಎ‌ಂ.ವಿ ಭಟ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

p>

LEAVE A REPLY

Please enter your comment!
Please enter your name here