ಬುಡಕಟ್ಟು ಸಮುದಾಯಗಳ ಪ್ರಚಲಿತ ವಿಷಯದ ರಾಜ್ಯಮಟ್ಟದ ಕಾರ್ಯಾಗಾರ

0

ಬೆಳ್ತಂಗಡಿ: ಬುಡಕಟ್ಟು ಸಮುದಾಯದ ಸಮಸ್ಯೆ ಪರಿಹರಿಸಲು ಆದಷ್ಟು ಪ್ರಯತ್ನ ಮಾಡುತ್ತೇವೆ. ಈ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಅರಣ್ಯ ಹಕ್ಕು ಕಾರ್ಯಾಗಾರ ನಡೆಸಿ ಸಮಸ್ಯೆ ಪರಿಹಾರ ಮಾಡುವುದರ ಜೊತೆಗೆ ಗ್ರಾಮ ಮಟ್ಟದಲ್ಲಿ ಸಾರ್ವಜನಿಕರಿಗೆ ಮಾತ್ರವಲ್ಲದೆ ಸರಕಾರಿ ಅಧಿಕಾರಿಗಳಿಗೂ ಅರಿವು ಮೂಡಿಸುವ ಕೆಲಸ ಮಾಡುವುದು ಅಗತ್ಯ ಎಂದು ದ.ಕ. ಜಿಲ್ಲೆಯ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್ ಹೇಳಿದರು.

ಕೊಯ್ಯೂರು ಶಿವಗಿರಿಯಲ್ಲಿರುವ ಮಲೆಕುಡಿಯರ ಸಮುದಾಯ ಭವನದಲ್ಲಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ರಾಜ್ಯ ಒಕ್ಕೂಟದ ಆಶ್ರಯದಲ್ಲಿ ರಾಜ್ಯ ಮಲೆಕುಡಿಯ ಸಂಘ ಕರ್ನಾಟಕ ಹಾಗೂ ಮಲೆಕುಡಿಯ ಸಂಘ ದ.ಕ. ಜಿಲ್ಲೆ ಇದರ ಸಹಯೋಗದೊಂದಿಗೆ ನಡೆದ ಜೇನು ಕುರುಬ, ಬೆಟ್ಟ ಕುರುಬ, ಯರವ, ಸೋಲಿಗ, ಕೊರಗ, ಹಸಲರು, ಗೊಂಡ, ಮಲೆಕುಡಿಯ, ಗೌಡ್ಲು, ಸಿದ್ದಿ, ಹಕ್ಕಿಪಿಕ್ಕಿ ಡೋಂಗ್ರೀ-ಗರಾಸಿಯಾ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಪ್ರಚಲಿತ ವಿಷಯಗಳ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಹೈಕೋರ್ಟ್ ನ್ಯಾಯವಾದಿ ಜಯರಾಮ್ ಸಿದ್ಧಿ ಅವರು ಮಾತನಾಡಿ, ಕಾನೂನುಗಳು ಸಮುದಾಯದ ಪರವಾಗಿದ್ದರೂ ಹಲವು ಸಂದರ್ಭಗಳಲ್ಲಿ ಕಾನೂನು ಮತ್ತು ಅದರ ಅನುಷ್ಠಾನ ಕ್ರಮದಿಂದಾಗಿ ಬುಡಕಟ್ಟು ಸಮುದಾಯಗಳು ಸಾಕಷ್ಟು ಕಷ್ಟ ಅನುಭವಿಸುತ್ತವೆ. ಸಂಘಟನೆಯ ಮೂಲಕ ನಮ್ಮ ಸಮುದಾಯಗಳ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಬೇಕಿದೆ ಎಂದರು. ಚಾಮರಾಜನಗರ ಜಿಲ್ಲೆಯ ಸೋಲಿಗ ಅಭಿವೃದ್ಧಿ ಸಂಘಟನೆಯ ಡಾ. ಸಿ. ಮಾದೇಗೌಡರವರು ಬುಡಕಟ್ಟು ಸಮುದಾಯ ಮತ್ತು ಪ್ರಕೃತಿಯ ಸಂಬಂಧವು ತಾಯಿ ಮಗುವಿನ ಸಂಬಂಧವೇ ಆಗಿದೆ. ಪರಿಸರ ಹಾಗೂ ಪ್ರಾಣಿಗಳನ್ನು ನಾಶ ಮಾಡದೆ ಅವುಗಳನ್ನು ಪೂಜಿಸಿ ಸಹಬಾಳ್ವೆ ನಡೆಸುವವರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಲೆಕುಡಿಯರ ಸಂಘದ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಎಳನೀರು ಮಾತನಾಡಿ ಮಲೆಕುಡಿಯ ಸಮುದಾಯದ ವಿವಿಧ ಸಮಸ್ಯೆಗಳನ್ನು ತಿಳಿಸಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಇಲಾಖೆಯ ಸಹಕಾರ ಕೋರಿದರು. ಮಂಗಳೂರು ವಿ.ವಿ.ಯ ಸಮಾಜಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಸಬಿತಾ ಕೊರಗ, ಬೆಳ್ತಂಗಡಿ ತಾಲೂಕು ಸಮಾಜ ಕಲ್ಯಾಣ ಇಲಾಖಾಧಿಕಾರಿ ಹೇಮಚಂದ್ರ, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ರಾಜ್ಯ ಒಕ್ಕೂಟದ ಸಂಯೋಜಕ ಮೈಸೂರಿನ ಶೈಲೇಂದ್ರ, ಉಡುಪಿ ಕಾಪು ಪೆರ್ನಾಲುವಿನ ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ರಾಜ್ಯ ಒಕ್ಕೂಟದ ಸಂಚಾಲಕರಾದ ಪುಷ್ಪ ಬೆಟ್ಟಕುರುಬ, ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಕರ್ನಾಟಕ ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ್ ಗೌಡ, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ರಾಜ್ಯ ಒಕ್ಕೂಟದ ದ.ಕ. ಜಿಲ್ಲಾ ಸಂಚಾಲಕ ಬಾಲಕೃಷ್ಣ ಕೆ ಪೊಳಲಿ ಮತ್ತು ಸಂಜೀವ ಮೂಡಬಿದ್ರೆ, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ರಾಜ್ಯ ಒಕ್ಕೂಟದ ಉಡುಪಿ ಜಿಲ್ಲಾ ಸಂಚಾಲಕ ಕೆ, ಪುತ್ರನ್ ಹೆಬ್ರಿ, ಶಿವಮೊಗ್ಗ ಜಿಲ್ಲೆಯ ಸಂಚಾಲಕ ರಾಮಣ್ಣ ಹಸಲರು, ಕೊಡಗು ಜಿಲ್ಲಾ ಬುಡಕಟ್ಟು ಕಾರ್ಮಿಕರ ಸಂಘದ ಕಾರ್ಯದರ್ಶಿ ವೈ.ಬಿ. ಗಪ್ಪು, ಕೋಶಾಧಿಕಾರಿ ಜ್ಯೋತಿ ಮಾಯಾಮುಡಿ, ಚಿಕ್ಕಮಗಳೂರು ಕಾರ್ಮಿಕರ ನಿವೇಶನ ರಹಿತರ ಸಂಘದ ಕಾರ್ಯದರ್ಶಿ ರಾಜೇಶ್ ಹಾಗೂ ಉಡುಪಿ ಜಿಲ್ಲಾ ಮಲೆಕುಡಿಯರ ಸಂಘದ ಅಧ್ಯಕ್ಷ ಗಂಗಾಧರ ಈದು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಯೇಂದ್ರ ಎಂ. ನಿಡ್ಲೆ ಸ್ವಾಗತಿಸಿ, ರಾಜ್ಯ ಮಲೆಕುಡಿಯ ಸಂಘದ ಜೊತೆ ಕಾರ್ಯದರ್ಶಿ ಜಯರಾಮ ವಂದಿಸಿದರು. ರೇಷ್ಮಾ ಬೆಳಾಲು ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here