ಬೆಳ್ತಂಗಡಿ: ಕಳೆದ ಎರಡು ವರ್ಷದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 400 ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ.ಯುವಜನರನ್ನು ಹೆಚ್ಚು ಗುರಿಯಾಗಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಕಾಲೇಜು ವಿದ್ಯಾರ್ಥಿಗಳನ್ನೇ ಸಂಪನ್ಮೂಲ ವ್ಯಕ್ತಿಗಳಾಗಿ ತಯಾರು ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಹೇಳಿದರು.
ಲಯನ್ಸ್ ಕ್ಲಬ್ ಬೆಳ್ತಂಗಡಿ ಇಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಸಾಪ ರಾಜ್ಯ ಸಮಿತಿ ಒಂದು ಕೋಟಿ ಸದಸ್ಯತ್ವ ಗುರಿ ಹೊಂದಿದ್ದು ಅದರ ಕಾರ್ಯ ಸಾಧನೆಗಾಗಿ 31 ಜಿಲ್ಲಾಧ್ಯಕ್ಷರುಗಳೂ ಕೂಡ ಶ್ರಮಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಹೊಸ ಬದಲಾವಣೆಗೆ ಪ್ರಯತ್ನ ಮಾಡುತ್ತಿದ್ದೇವೆ.ಜಿಲ್ಲೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮ ಯೋಜನೆ, ಸಂಘ ಸಂಸ್ಥೆಗಳ ಜೊತೆ ಸಂಬಂಧ ವೃದ್ದಿ, ಅಶಕ್ತ ಕಲಾವಿದರು ಮತ್ತು ಸಾಹಿತಿಗಳ ಮನೆಭೇಟಿ ಸಾಂತ್ವಾನ ಇವೇ ಮೊದಲಾದ ಚಟುವಟಿಕೆ ನಡೆಸಲಾಗುತ್ತಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು,ಸುವರ್ಣ ಮಹೋತ್ಸವದ ಪ್ರಯುಕ್ತ ಲಯನ್ಸ್ ಕ್ಲಬ್ ಸೇವಾ ಚಟುವಟಿಕೆಯೊಂದಿಗೆ ನಾಡು ನುಡಿಯ ರಕ್ಷಣೆ ಮತ್ತು ಜಾಗೃತಿಯ ಕಾರ್ಯಕ್ರಮವನ್ನೂ ನಡೆಸಿಕೊಂಡು ಬರುತ್ತಿದೆ ಎಂದರು.
ಸ್ಥಾಪಕ ಸದಸ್ಯ ಎಂ.ಜಿ ಶೆಟ್ಟಿ, ಹಿರಿಯರಾದ ರಾಮಕೃಷ್ಣ ಗೌಡ, ಅಶೋಕ್ ಕುಮಾರ್ ಬಿ.ಪಿ, ಧರಣೇಂದ್ರ ಕೆ ಜೈನ್, ರವೀಂದ್ರ ಶೆಟ್ಟಿ ಬಳೆಂಜ, ಸುಶೀಲಾ ಎಸ್ ಹೆಗ್ಗೆ, ವಸಂತ ಶೆಟ್ಟಿ, ಅಶ್ರಫ್ ಆಲಿಕುಂಞಿ, ದತ್ತಾತ್ರೇಯ ಗೊಲ್ಲ ಭಾಗವಹಿಸಿದ್ದರು.
ಕೃಷ್ಣ ಆಚಾರ್ ಅತಿಥಿಗಳ ಪರಿಚಯ ಮಾಡಿದರು. ಕಾರ್ಯದರ್ಶಿ ಅನಂತಕೃಷ್ಣ ವರದಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ. ದೇವಿ ಪ್ರಸಾದ್ ಬೊಳ್ಮ ವಂದಿಸಿದರು.