ಬೋಸ್, ಪಟೇಲ್, ಸಾರ್ವರ್ಕರ್, ಸಿಂಗ್‌ರವರನ್ನು ಆದರ್ಶವಾಗಿಟ್ಟುಕೊಂಡು ನಾಯಕನಾದವನು ನಾನು- ನೂರು ಕೇಸು ಹಾಕಿಸಿಕೊಳ್ಳಲೂ ಸಿದ್ಧ; ಜೈಲು ಸೇರಲೂ ತಯಾರಿದ್ದೇನೆ: ಶಾಸಕ ಹರೀಶ್ ಪೂಂಜ ಪ್ರತಿಕ್ರಿಯೆ

0

ಬೆಳ್ತಂಗಡಿ: ಕಳೆಂಜ ಗ್ರಾಮದ ಕಾಯರ್ತಡ್ಕದಲ್ಲಿ ಮನೆಯ ನಿರ್ಮಾಣಕ್ಕಾಗಿ ಹಾಕಿದ್ದ ಫೌಂಡೇಶನ್ ಅನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತೆರವು ಮಾಡಿದ್ದನ್ನು ಪ್ರಶ್ನಿಸಿದ ವೇಳೆ ಉಂಟಾದ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಕೇಸ್‌ಗೆ ಸಂಬಂಧಿಸಿ ಶಾಸಕ ಹರೀಶ್ ಪೂಂಜ ಅವರು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನೋಡೇ ಬಿಡೋಣ. ನಾನು ಶಾಸಕನಾಗಿರುವುದು ನನ್ನ ಜನರ ಸೇವೆಗೆ ಮತ್ತು ಅವರ ರಕ್ಷಣೆಗೆ ಜೈಲಿಗೆ ಹೋಗಲು ಸಿದ್ಧ. ಬಾಲ್ಯದಿಂದಲೂ ಸುಭಾಷ್‌ಚಂದ್ರ ಬೋಸ್, ಸರ್ದಾರ್ ಪಟೇಲ್, ವೀರ ಸಾವರ್ಕರ್, ಭಗತ್ ಸಿಂಗ್ ಮುಂತಾದವರನ್ನು ಆದರ್ಶವಾಗಿ ಇಟ್ಟುಕೊಂಡು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ದಿನಗಳಿಂದ ಜನ ಸೇವೆ, ಜನರಿಗಾಗಿ ಸಂಘರ್ಷ ಮಾಡಿಕೊಂಡು ನಾಯಕನಾದವನು. ನಾನು ಜನರಿಂದ ಶಾಸಕನಾಗಿ ಜನರಿಗೋಸ್ಕರ ಇರುವವನು ಅದಕ್ಕಾಗಿ ಯಾವ ಬೆಲೆ ತೆರಲು ಸಿದ್ದ.

ನನ್ನ ವಿಧಾನಸಭಾ ಕ್ಷೇತ್ರದಲ್ಲಿ, ಅರಣ್ಯದ ಅಂಚಿನಲ್ಲಿ, ನೂರು ವರ್ಷಕ್ಕಿಂತಲೂ ಹಿಂದಿನಿAದ ಕೃಷಿ ಚಟುವಟಿಕೆ ಮಾಡುತ್ತಾ ಬಂದಿದ್ದ ಕಳೆಂಜದ ಶ್ರೀ ದೇವಣ್ಣ ಗೌಡ ಅವರ ಕುಟುಂಬವನ್ನು ಒಕ್ಕಲೆಬ್ಬಿಸಲು ಯತ್ನಿಸಿದ ಅರಣ್ಯ ಇಲಾಖೆಯ ವಿರುದ್ಧ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಶಾಸಕ ಮಿತ್ರರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಸೇರಿ ಪ್ರತಿಭಟಿಸಿ ಬಡ ಕುಟುಂಬವನ್ನು ಒಕ್ಕಲೆಬ್ಬಿಸುವುದರಿಂದ ತಡೆದಿದ್ದೆವು. ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಮನೆಯವರ ಪರವಾಗಿ ನಾನೊಬ್ಬ ಜನಪ್ರತಿನಿಧಿಯಾಗಿ ಧ್ವನಿ ಎತ್ತಿದ್ದು ತಪ್ಪಾಯಿತೇ? ನನ್ನ ಕ್ಷೇತ್ರದ ಜನರ ಪರವಾಗಿ ಹೋರಾಡುವ ಹಕ್ಕು ನನಗಿಲ್ಲವೇ? ನನ್ನ ಜನ ನನ್ನಲ್ಲಿ ಸಮಸ್ಯೆ ಹೇಳಿಕೊಂಡಾಗ ಸುಮ್ಮನಿರಬೇಕೆ? ಹೀಗಾದರೆ ಸಾಮಾನ್ಯ ಜನರ ಗತಿಯೇನು? ಜನರ ಸಮಸ್ಯೆಗೆ ಧ್ವನಿಯಾದ ಒಬ್ಬ ಜನಪ್ರತಿನಿಧಿಯನ್ನು ಹೀಗೆಲ್ಲ ಕಾಡುವುದಾದರೆ ಜನಸಾಮಾನ್ಯರು ಕಾಂಗ್ರೆಸ್ ಸರ್ಕಾರದಡಿಯಲ್ಲಿ ಹೇಗೆ ಬದುಕಬೇಕು? ಮಾನ್ಯ ಮುಖ್ಯಮಂತ್ರಿಗಳೇ, ಅರಣ್ಯ ಸಚಿವರೇ ನಿಮ್ಮ ಈ ಬೆದರಿಕೆ ತಂತ್ರಗಳಿಗೆ ನಾನು ಬೆದರುವುದಿಲ್ಲ.ಮತ್ತೆ ಹೇಳುತ್ತಿದ್ದೇನೆ ಬಡವರಿಗಾಗಿ ಇಂತಹ ನೂರು ಕೇಸು ಹಾಕಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ, ಜೈಲು ಸೇರಲೂ ತಯಾರಿದ್ದೇನೆ ಎಂದು ಹರೀಶ್ ಪೂಂಜ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here