ಉಜಿರೆ: ಸಾಹಿತ್ಯವೆಂದರೆ ಕೇವಲ ಕಥೆ, ಕವನ, ಕಾದಂಬರಿಯಲ್ಲ. ಸಾಹಿತ್ಯದಲ್ಲಿ ಬದುಕಿನ ಪ್ರತಿಯೊಂದು ಅಂಶವೂ ಒಳಗೊಂಡಿರುತ್ತದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮುಖ್ಯಸ್ಥೆ ಡಾ.ಮಂಜುಶ್ರೀ ಆರ್. ಹೇಳಿದರು.ಉಜಿರೆ ಶ್ರೀ ಧ.ಮಂ. ಪದವಿ ಕಾಲೇಜಿನಲ್ಲಿ ಆ.25ರಂದು ನಡೆದ ಐಚ್ಛಿಕ ಇಂಗ್ಲಿಷ್ ವಿಭಾಗದ ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಸಾಹಿತ್ಯವು ಬದುಕನ್ನು ಒಳಗೊಂಡಿರುತ್ತದೆ.
ಸಾಹಿತ್ಯ ಮತ್ತು ಸೃಜನಶೀಲತೆ ಒಟ್ಟಿಗೆ ಕೆಲಸ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.ವಿದ್ಯಾರ್ಥಿಗಳಿಗೆ ವಿಭಾಗದ ಚಟುವಟಿಕೆಗಳು ನೀಡುವ ಅನುಭವ ದೊಡ್ಡದು. ವೈಯಕ್ತಿಕವಾಗಿ ಎಲ್ಲರೂ ವಿಭಿನ್ನರಾಗಿದ್ದರೂ ಗುಂಪಾಗಿ ಒಟ್ಟಾದಾಗ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದರಿಂದ ಏಳಿಗೆಗೆ ಸಹಕಾರಿಯಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಗುರುತಿಸಲಾಯಿತು.ಪ್ರಥಮ ವರ್ಷದ ಐಚ್ಛಿಕ ಇಂಗ್ಲಿಷ್ ವಿಭಾಗದ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥ ಡಾ. ಗಜಾನನ ಆರ್.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಾಹಿತ್ಯ ಸಂಘದ ನೂತನ ಅಧ್ಯಕ್ಷೆ ತೇಜಸ್ವಿ ಕೆ., ಮಾಜಿ ಅಧ್ಯಕ್ಷ ಪ್ರತೀಕ್ ರೈ, ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ವರ್ಷದ ವಿದ್ಯಾರ್ಥಿನಿ ಡೆಸಿನಾ ಸ್ವಾಗತಿಸಿ, ದ್ವಿತೀಯ ವರ್ಷದ ವಿದ್ಯಾರ್ಥಿನಿ ಅಮಿತಾ ವಂದಿಸಿದರು.ತೃತೀಯ ವರ್ಷದ ವಿದ್ಯಾರ್ಥಿನಿ ಅಲೀನಾ ನಿರೂಪಿಸಿದರು.