ಬೆಳ್ತಂಗಡಿ: ‘ವಿದ್ಯಾರ್ಥಿಗಳು ಸತ್ಯದ ನಿಷ್ಠೆಯಲ್ಲಿ ಬೆಳೆಯಬೇಕು ಎಂದು ಶಾಲಾ ಕಾಲೇಜುಗಳು ನೀತಿ-ನಿಯಮಗಳನ್ನು ರೂಪಿಸಿರುತ್ತವೆ. ಅವುಗಳನ್ನು ಅತ್ಯುತ್ತಮವಾಗಿ ನಿಭಾಯಿಸಿ ಕಾಲೇಜಿನ ಕೀರ್ತಿಯನ್ನು ಬೆಳಗುವ ಕೆಲಸವನ್ನು ವಿದ್ಯಾರ್ಥಿ ಸಂಘ ಮಾಡಬೇಕು’ ಎಂದು ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶಪಾಲ ಮುರಳೀಧರ ಜಿ.ಎನ್. ಹೇಳಿದರು.
ಅವರು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆದ ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ 2023-24 ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾರ್ಥಿ ಬದುಕಿನಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡು ತಮ್ಮನ್ನು ತಾವು ಶ್ರೇಷ್ಠತೆಯ ಕಡೆಗೆ ಕೊಂಡೊಯ್ಯಬೇಕು. ಸಾಮಾಜಿಕ ವಿನಮ್ರತೆ, ಸಾಮಾಜಿಕ ಹಾವಭಾವ ಹಾಗೂ ಸಕಾರಾತ್ಮಕವಾದ ಯೋಚನೆ ಮತ್ತು ವಿಚಾರಗಳ ಮೂಲಕ ನಮ್ಮ ವ್ಯಕ್ತಿತ್ವಕ್ಕೆ ಸಾಮಾಜಿಕವಾದ ಗೌರವ ಬರುವ ಹಾಗೆ ಮಾಡಬೇಕು. ಹಾಗಾಗಿ ವಿದ್ಯಾರ್ಥಿ ಸಂಘದ ಜವಾಬ್ದಾರಿಯ ಮೂಲಕ ಬದುಕು ಬೆಳಗುವ ಕಾರ್ಯಗಳಾಗಲಿ’ ಎಂದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮಾಜಿ ಶಾಸಕ ಕೆ. ವಸಂತ ಬಂಗೇರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ ವಿದ್ಯಾರ್ಥಿಗಳಲ್ಲಿ ವಿದ್ಯೆಯ ಬಗ್ಗೆ ಹೋರಾಟವಿರಬೇಕು. ಕಾಲೇಜಿನ ಒಳಗೆ ತನ್ನ ಬೆಳವಣಿಗೆಗೆ ಪೂರಕವಾಗಿ ಸಿಗುವ ಅವಕಾಶಗಳನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನವಿರಬೇಕು. ಕಾಲೇಜಿನ ಯಾವುದೇ ಕಾರ್ಯಕ್ರಮದಲ್ಲಿ ತನ್ನ ಮನೆಯ ಕಾರ್ಯಕ್ರಮ ಎಂದು ಭಾವಿಸಿ ಹೆತ್ತವರ ಜೊತೆ ಹಾಜರಾಗುವ ಮನೋಸ್ಥಿತಿ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದರು.
ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಪೀತಾಂಬರ ಹೇರಾಜೆ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿ, ‘ ಉತ್ತಮ ಶಿಕ್ಷಣದ ಜೊತೆ ಶಿಸ್ತು ಬಹಳ ಮುಖ್ಯವಾದುದು. ಸಮಾಜದಲ್ಲಿ ಗೌರವದ ಬದುಕಿಗೆ ಅವೆರಡೂ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಅದನ್ನು ಸಂಪಾದಿಸುವ ಕಡೆಗೆ ಮಗ್ನರಾಗಿರಬೇಕು ‘ ಎಂದರು
ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ, ವಿದ್ಯಾರ್ಥಿ ನಾಯಕ ಮಿತ್ರೇಶ್, ಕಾರ್ಯದರ್ಶಿ ಶ್ರೀಲತಾ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಶ್ರಾವ್ಯ ಹಾಗೂ ಜೋಬಿನ್ ಜೋವಿಸ್ ಮತ್ತು ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನಿರೀಕ್ಷಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಪ್ರಸ್ತಾವಿಸಿದರು. ಉಪ ಪ್ರಾಂಶುಪಾಲ ಸಮೀವುಲ್ಲಾ ಬಿ.ಎ. ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರುತಿ ಅತಿಥಿಗಳನ್ನು ಪರಿಚಯಿಸಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಭಾಗ್ಯಶ್ರೀ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಇತಿಹಾಸ ಉಪನ್ಯಾಸಕ ಹರೀಶ್ ಪೂಜಾರಿ ಹಾಗೂ ಲೆಕ್ಕಶಾಸ್ತ್ರ ಉಪನ್ಯಾಸಕಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭಾಷಾ ಉಪನ್ಯಾಸಕ ಗಣೇಶ್ ಬಿ ಶಿರ್ಲಾಲು ವಂದಿಸಿದರು.