


ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಜುಲೈ 3ರಂದು ಶಾಲಾ ಮಂತ್ರಿಮಂಡಲದ ನೂತನ ಸದಸ್ಯರಿಗೆ ಪ್ರಮಾಣ ವಚನ ಸಮಾರಂಭವನ್ನು ಏರ್ಪಡಿಸಲಾಯಿತು.ಜೊತೆಗೆ ಶಾಲಾ ವಿವಿಧ ಸಂಘಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಶಾಲಾ ಸಂಚಾಲಕರಾದ ಅತೀ ವಂ.ಫಾ ವಾಲ್ಟರ್ ಡಿಮೆಲ್ಲೋ ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಾಲಾ ಮಂತ್ರಿ ಮಂಡಲದ ನಾಯಕರಿಗೆ ಉತ್ತಮ ನಾಯಕತ್ವ ಗುಣ ಹಾಗೂ ಶಿಸ್ತಿನಿಂದ ತಮಗೆ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ ಶಾಲೆಯ ಪ್ರಗತಿಗೆ ಸಹಕರಿಸಬೇಕೆಂದು ಕಿವಿಮಾತು ನೀಡಿ ಆಶೀರ್ವದಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂ.ಫಾ.ಕ್ಲಿಫರ್ಡ್ ಪಿಂಟೋರವರು ಶಾಲಾ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಿದರು.



ಸಂತ ಫ್ರಾನ್ಸಿಸ್ ಅಸಿಸ್ಸಿ ಚರ್ಚ್, ನೈನಾಡು ಧರ್ಮ ಕ್ಷೇತ್ರದ ಧರ್ಮಗುರುಗಳಾದ ವಂ. ಫಾ. ಅನಿಲ್ ಅವಿಲ್ಡ್ ಲೋಬೊರವರು ಶಾಲೆಯ ವಿವಿಧ ಸಂಘಗಳ ಉದ್ಘಾಟನೆಗೈದರು.ಕನ್ನಡ ಸಂಘ, ಇಂಗ್ಲಿಷ್ ಸಂಘ, ಹಿಂದಿ ಸಂಘ, ವಿಜ್ಞಾನ ಸಂಘ, ಪರಿಸರ ಸಂಘ ಹಾಗೂ ಸ್ಕೌಟ್, ಗೈಡ್ಸ್, ಕಬ್ಸ್ ಮತ್ತು ಬುಲ್ ಬುಲ್ ನಂತಹ ವಿವಿಧ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಮೂಡಿಸಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ನುಡಿದರು.
ಶಾಲಾ ನೃತ್ಯ ಮತ್ತು ಕರಾಟೆ ತರಬೇತುದಾರರಾದ ಉದಯ್ ಹಾಗೂ ಅಶೋಕ್ ರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳು ಹಾಡು, ನೃತ್ಯಗಳ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ವಿದ್ಯಾರ್ಥಿನಿಯರಾದ ಸೋನಿಯಾ ಬೆನ್ನಿಸ್ ಸ್ವಾಗತಿಸಿ, ಸಫೀದಾ ವಂದಿಸಿದರು. ಸಹಶಿಕ್ಷಕಿ ರೆನಿಟಾ ಲಸ್ರಾದೋ ಕಾರ್ಯಕ್ರಮ ನಿರ್ವಹಿಸಿದರು.









