ಉಜಿರೆ: ದೇಶಕ್ಕಾಗಿ ಏನನ್ನಾದರೂ ಹೊಸದನ್ನು ಮಾಡುವ ತುಡಿತ ಯುವಕರಲ್ಲಿರುತ್ತದೆ. ಅಂತಹ ಯುವ ಜನರು ಇಂದಿನ ದಿನಗಳಲ್ಲಿ ದೇಶದ ಸಂಸತ್ತಿನ ಒಳಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲಿಡಬೇಕಾಗಿದೆ ಎಂದು ಎಸ್‌ಡಿಎಂ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ ಅಭಿಪ್ರಾಯಪಟ್ಟರು.
ಬುಧವಾರ ಉಜಿರೆಯ ಎಸ್‌ಡಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗವು ಆಯೋಜಿಸಿದ್ದ “ಮಾದರಿ ಸಂಸತ್ತಿನ” ಪ್ರಾತ್ಯಕ್ಷಿಕೆಯನ್ನು ನೋಡಿದ ಬಳಿಕ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇಶದ ಸಂಸತ್ತಿನಲ್ಲಿ ಜರುಗುವ ಪ್ರತಿಯೊಂದು ಘಟನೆಯೂ ದೇಶದ ಜನರ ಮೇಲೆ ಪ್ರಭಾವ ಬೀರುತ್ತದೆ.
ವಿದ್ಯಾರ್ಥಿಗಳ ಈ ಸಂಸತ್ತಿನಲ್ಲಿ ದೇಶದಲ್ಲಿ ಜರಗುತ್ತಿರುವ ಸಾಮಾನ್ಯ ಸಂಗತಿಗಳಿಂದ ಹಿಡಿದು ಅಂತರಾಷ್ಟ್ರೀಯ ವಿಷಯಗಳವರೆಗೆ ಕೂಡಿದ್ದು, ಇದೊಂದು ಮಾದರಿ ಸಂಸತ್ತು ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, “ನಮ್ಮ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗವು ಯಾವಾಗಲೂ ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಈ ಮಾದರಿ ಸಂಸತ್ತು, ನಿಜವಾದ ಸಂಸತ್ತಿನ ಒಳಗಿದ್ದ ಅನುಭವವನ್ನು ನೀಡಿತು” ಎಂದು ಪ್ರಶಂಸೆ ಮಾಡಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಅಣಕು ಮಾದರಿ ಸಂಸತ್ತಿನ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಲೀಫ್ ಎ.ಪಿ. ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳಾದ ಜಯಶ್ರೀ ನಿರೂಪಿಸಿ, ಅನ್ನಪೂರ್ಣ ಸ್ವಾಗತಿಸಿ, ಜಕ್ಷಿತಾ ವಂದನಾರ್ಪಣೆ ಮಾಡಿದರು. ಪ್ರಾಧ್ಯಾಪಕರಾದ ಡಾ. ಮಹೇಶ್ ಕುಮಾರ್ ಶೆಟ್ಟಿ, ನಟರಾಜ್, ಭಾಗ್ಯ ಶ್ರೀ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.