
ಶಿಶಿಲ: “ಶಿಶಿಲ ಸೀಮೆಯ ಚಿತ್ಪಾವನ ಬ್ರಾಹ್ಮಣ ಜನಾಂಗದ ನೆಕ್ಕರಡ್ಕ ವಾಳ್ಯದ ಹೆಬ್ಬಾರ್ ಗೋಖಲೆ ಮನೆತನ” ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಉಜಿರೆ ಶಿವಾಜಿ ನಗರದ ಪ್ರಭಾಕರ ಹೆಬ್ಬಾರ್ ಅವರ ಮನೆಯಲ್ಲಿ ಜೂ.4 ರಂದು ನಡೆಯಿತು.
ವೇಣೂರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ ತುಳುಪುಳೆ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿ ನೆಕ್ಕರಡ್ಕ ಗೋಖಲೆ ಮನೆತನದ ಸುಮಾರು 250 ವರ್ಷಗಳ ಮಾಹಿತಿಗಳನ್ನು ಸಂಗ್ರಹಿಸಿದ ಗೋವಿಂದ ದಾಮಲೆಯವರ ಕಾರ್ಯವನ್ನು ಶ್ಲಾಘಿಸಿದರು. ಹೆಬ್ಬಾರ್ ಮನೆತನದ ಪರವಾಗಿ ಹೊತ್ತಗೆಯ ಪ್ರಕಾಶಕ ರಮೇಶ್ ಹೆಬ್ಬಾರ್ ಮಣ್ಣಾಪಾಪು ಅವರು ದಾಮಲೆಯವರನ್ನು ಸಮ್ಮಾನಿಸಿದರು.
ಕೃತಿಯ ಸಂಪಾದಕ ಗೋವಿಂದ ದಾಮಲೆ ಅವರು, ತಾನು ದಾಖಲೆಗಳನ್ನು ಸಂಗ್ರಹಿಸಲು ಪಟ್ಟ ಶ್ರಮವನ್ನು ಎಳೆ ಎಳೆಯಾಗಿ ವಿವರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಕೇಳ್ಕರ್ ಅವರು ಪ್ರತಿಯೊಂದು ಕುಟುಂಬದ ಪೂರ್ವ ಇತಿಹಾಸವನ್ನು ನಾವು ದಾಖಲಿಸುವುದು ಅಗತ್ಯ. ಇದು ಮುಂದಿನ ಪೀಳಿಗೆಗೆ ಉತ್ತಮ ದಾಖಲೆಯಾಗುತ್ತದೆ ಎಂದರು.

ಪತ್ರಕರ್ತ ಮುಂಡಾಜೆ ಅರವಿಂದ ಹೆಬ್ಬಾರ್, ಲೋಕೇಶ್ ಹೆಬ್ಬಾರ್ ಮಲೆಬೆಟ್ಟು, ಶಂಕರ ಹೆಬ್ಬಾರ್ ಕೋಡಂಗೆ, ವಿಷ್ಣು ಹೆಬ್ಬಾರ್, ಅರುಣ ಹೆಬ್ಬಾರ್, ಗೋಖಲೆ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ದೀಪಿಕಾ ಹೆಬ್ಬಾರ್, ವಿಶಾಖಾ, ವಿಭಾ ಕೇಳ್ಕರ್ ಪ್ರಾರ್ಥಿಸಿದರು. ಪ್ರಭಾಕರ ಹೆಬ್ಬಾರ್ ಸ್ವಾಗತಿಸಿದರು. ಮಹಾದೇವ ಹೆಬ್ಬಾರ್ ಪ್ರಸ್ತಾವಿಸಿದರು. ಶ್ರೀವತ್ಸ ಹೆಬ್ಬಾರ್ ವಂದಿಸಿದರು. ಕಿರಣ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು.