ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಬೆಳಾಲಿನಲ್ಲಿ ಶಿಕ್ಷಕ ರಕ್ಷಕ ಮತ್ತು ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಆರು ದಿನಗಳ ಬೇಸಿಗೆ ಶಿಬಿರ ನಡೆಯಿತು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಲೈಮಾನ್ ಭೀಮಂಡೆ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ , ಬೆಳಾಲು ಪ್ರೌಢಶಾಲೆಯಲ್ಲಿ ಪ್ರತೀ ವರ್ಷ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬರುತ್ತಿರುವುದು ಶ್ಲಾಘನೀಯ.
ಶಿಬಿರದ ಮೂಲಕ ಮಕ್ಕಳು ತಮ್ಮ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಭವಿಷ್ಯದ ಬದುಕಿನ ಯಶಸ್ಸಿಗೆ ಕೌಶಲಗಳನ್ನೂ ಪಡೆದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಬಹಳಷ್ಟು ಶ್ರಮ ವಹಿಸುತ್ತಿರುವುದು ಅಭಿನಂದನೀಯ ಎಂದು ಅಭಿಪ್ರಾಯಪಟ್ಟರು.
ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕನಿಕ್ಕಿಲರವರು ಆಗಮಿಸಿದ್ದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಧರ್ಮಸ್ಥಳ ಪ್ರೌಢಶಾಲೆಯ ಕಲಾ ಶಿಕ್ಷಕ ರೂಪೇಶ್, ಶಿಬಿರದ ಸಂಯೋಜಕ ಕೃಷ್ಣಾನಂದ, ಸುಮನ್ ಯು ಎಸ್ , ಚಿತ್ರಾವತಿ ಪಿ ಎಚ್, ಸುಂದರ ಡಿ. ಯವರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಬಿರದಲ್ಲಿ ಕರಕುಶಲ ತಯಾರಿ, ಪತ್ರಿಕೆ ಮತ್ತು ವರದಿಗಾರಿಕೆ, ಪುರಾಣ ಕಥೆಗಳಲ್ಲಿ ಜೀವನ ಮೌಲ್ಯ, ಕೃಷಿ ಕ್ಷೇತ್ರ ಭೇಟಿ ಮೊದಲಾದ ಕಾರ್ಯಕ್ರಮವು ಜರಗಲಿದೆ. ವಿಶೇಷವಾಗಿ ಒಂದು ದಿನ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಕಥೆ ಕವನ ಬರವಣಿಗೆಯ ಬಗ್ಗೆ ತರಬೇತಿ ಹಾಗೂ ದೇಶ ವಿದೇಶಗಳ, ಏಳುನೂರಕ್ಕಿಂತಲೂ ಅಧಿಕ ಹಣ್ಣು ಹಂಪಲುಗಳ ಕೃಷಿ ಮಾಡಿರುವ ಅಂತರಾಷ್ಟ್ರೀಯ ಖ್ಯಾತಿಯ ಅನಿಲ್ ಬಳಂಜರವರ ತೋಟ ಸಂದರ್ಶನ ಕಾರ್ಯಕ್ರಮವನ್ನೂ ಆಯೋಜನೆಗೊಳಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ರೂಪೇಶ್ ಧರ್ಮಸ್ಥಳ, ಉಜಿರೆ ಮಹಿಳಾ ಐ ಟಿ ಐ ನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು, ಪತ್ರಕರ್ತ ಅಶ್ರಫ್ ಆಲಿ ಕುಂಞಿ ಮುಂಡಾಜೆ, ಯಕ್ಷಗಾನ ಕಲಾವಿದ ಲಕ್ಷ್ಮಣ ಗೌಡ ಪುಳಿತ್ತಡಿ, ಯಶವಂತ್ ಕಲಾರಂಗ ಉಜಿರೆ, ಉಜಿರೆ ಶ್ರೀ ಧ ಮ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಇವರು ಆಗಮಿಸಲಿದ್ದಾರೆ.
ವಿದ್ಯಾರ್ಥಿಗಳಾದ ಲಿಖಿತ ಸ್ವಾಗತಿಸಿ, ಫಾತಿಮತ್ ತಬ್ಸೀರ ವಂದಿಸಿದರು, ಅಮೂಲ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಾರ್ಥನಾ ಮತ್ತು ಶರಣ್ಯ ಪ್ರಾರ್ಥಿಸಿದರು. ಎ.8ರ ವರೆಗೆ ಶಿಬಿರ ಜರಗಲಿದೆ.