ಬೆಳ್ತಂಗಡಿ: ತಾಲೂಕು ಕುಲಾಲ-ಕುಂಬಾರ ಸಮುದಾಯದ ಭವನ ನಿರ್ಮಾಣಕ್ಕೆ ಈಗಾಗಲೇ ರೂ1.75 ಕೋಟಿ ಅನುದಾನ ಒದಗಿಸಿದ್ದೇನೆ. ಇದರಲ್ಲಿ ರೂ. 25 ಲಕ್ಷ ಈಗಾಗಲೇ ಮಂಜೂರುಗೊಂಡಿದೆ. ತಾಲೂಕಿನ ಕುಲಾಲ ಕುಂಬಾರ ಸಮುದಾಯ ನನ್ನ ಕುಟುಂಬ ಸದಸ್ಯರಂತಿದ್ದು, ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ರಾಜ್ಯದಲ್ಲೇ ಮಾದರಿ ಸರ್ವಜ್ಞ ಪ್ರತಿಮೆ ಜತೆ ವೃತ್ತ ನಿರ್ಮಿಸಲು ಉತ್ಸುಕನಾಗಿದ್ದೇನೆಂದು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಹೇಳಿದರು.
ಮಾನ್ಯ ತಹಶೀಲ್ದಾರ ಕಚೇರಿ, ತಾ.ಪಂ. ಬೆಳ್ತಂಗಡಿ ಹಾಗೂ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಹಾಗೂ ಕುಲಾಲ ಕುಂಬಾರರ ಯುವವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಫೆ.20ರಂದು ಬೆಳ್ತಂಗಡಿ ಮಿನಿ ವಿಧಾನ ಸೌದದ ಸಭಾಂಗಣದಲ್ಲಿ ಜರಗಿದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತ್ರಿಪದಿಗಳ ಮೂಲಕ ಸಮಾಜದ ಪರಿವರ್ತನೆ ಜತೆ ತಾರತಮ್ಯತೆಯನ್ನು ಹೋಗಲಾಡಿಸಿದವರು ಸರ್ವಜ್ಞರು. ಮನುಕುಲಕ್ಕೆ ಹೊಸ ಸಂದೇಶ ಸಾರಿದ ಸರ್ವಜ್ಞ ವಿಶ್ವಮಾನ್ಯರು ಎಂದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಎ., ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬಿಎಸ್ವೈ ಅವರ ಅವಧಿಯಲ್ಲಿ ಸರ್ವಜ್ಞ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲು ಅವಕಾಶ ಮಾಡಿಕೊಟ್ಟಿದ್ದು, ಈ ಬಹುದೊಡ್ಡ ಗೌರವವನ್ನು ಸಮುದಾಯ ಮರೆಯುವಂತಿಲ್ಲ. ಇನ್ನೊಂದು ಬಹುದೊಡ್ಡ ಬೇಡಿಕೆ ಸರಕಾರದ ಮುಂದಿದ್ದು, ಸ್ವತಂತ್ರ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಸರಕಾರ ಮನಸ್ಸು ಮಾಡಬೇಕು, ಮಾನ್ಯ ಶಾಸಕರು ಮುಖ್ಯಮಂತ್ರಿಯವರಿಗೆ ಒತ್ತಡ ಹಾಕಬೇಕೆಂದು ಅವರು ಆಗ್ರಹಿಸಿದರು. ಪಟ್ಟಣ ಪಂಚಾಯತು ಮುಖ್ಯಾಧಿಕಾರಿ ರಾಜೇಶ್, ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ರಾಜ್ಯ ಸಮಿತಿಯ ಸಂಘಟನಾ ಕಾರ್ಯದರ್ಶಿ, ನಿವೃತ್ತ ಕಂದಾಯ ನಿರೀಕ್ಷಕ ಪದ್ಮಕುಮಾರ್ ಬೆಳ್ತಂಗಡಿ, ಉಪ ತಹಶೀಲ್ದಾರ್ ರವಿಕುಮಾರ್, ಕುಲಾಲ ಕುಂಬಾರರ ಯುವವೇದಿಕೆಯ ಅಧ್ಯಕ್ಷ ಉಮೇಶ್ ಕುಲಾಲ್, ಪ್ರಮುಖರಾದ ಲೋಕೇಶ್ ಕುಲಾಲ್ ಸಿಟಿ ಎಲೆಕ್ಟ್ರಾನಿಕ್ಸ್ ಗುರುವಾಯನಕೆರೆ, ರಾಜಿವ್ ಬಿ.ಎಚ್., ಕೃಷ್ಣಪ್ಪ ಕಾಶಿಬೆಟ್ಟು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೊನ್ನಯ್ಯ ಕಾಟಿಪಳ್ಳ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಿ.ಎಸ್. ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಕಚೇರಿ ಸಿಬ್ಬಂದಿ ಹೇಮಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.