ಶಿವರಾತ್ರಿಯ ಪ್ರಯುಕ್ತ ಪಾದಯಾತ್ರಿಗಳಿಗೆ ಉಚಿತ ವೈದ್ಯಕೀಯ ಸೇವೆ: ಚಾರ್ಮಾಡಿ, ಸತ್ಯನ್ಪಲ್ಕೆ ಶಿಬಿರಗಳ ಉದ್ಘಾಟನೆ

0

ಉಜಿರೆ: ಶಿವರಾತ್ರಿ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಸಾವಿರಾರು ಪಾದಯಾತ್ರಿಗಳಿಗೆ ಹೆಗ್ಗಡೆಯವರ ಆದೇಶದಂತೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಫೆ.14ರಿಂದ ಉಚಿತ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಲಾಯಿತು.
ಮುಂಡಾಜೆ ಮತ್ತು ಚಾರ್ಮಾಡಿ ಶಿಬಿರಗಳನ್ನು ಉದ್ಘಾಟಿಸಲಾಯಿತು. ಪಾದಯಾತ್ರಿಗಳ ಆರೋಗ್ಯ ಸೇವೆಗೆ ತೆರೆಯಲ್ಪಟ್ಟ ಮುಂಡಾಜೆಯ ಆರೋಗ್ಯ ಶಿಬಿರವನ್ನು ಸುಜಿತ್ ಭಿಡೆ ಹಾಗೂ ಚಾರ್ಮಾಡಿಯ ಶಿಬಿರವನ್ನು ಇಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಕಟ್ಟೆಮಜಲು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ಶಿಬಿರದ ಮೇಲ್ವಿಚಾರಕ ರವೀಂದ್ರ ಗುಡಿಗಾರ್, ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿ ಸುರೇಂದ್ರ, ಮೇಲ್ವಿಚಾರಕರು ರಾಜೇಶ್, ಮುಂಡಾಜೆ ಸಿ.ಎ ಬ್ಯಾಂಕ್ ಸಿ.ಇ.ಓ ಚಂದ್ರಕಾಂತ ಪ್ರಭು, ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಕಾಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು, ತುಮಕೂರು, ಬೀದರ್ ಮುಂತಾದ ದೂರದ ಊರಿನಿಂದ ಕಾಲ್ನಡಿಗೆಯಲ್ಲಿ ಬರುವ ಯಾತ್ರಾರ್ಥಿಗಳಿಗೆ ಈ ಶಿಬಿರಗಳಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವತಿಯಿಂದ ವೈದ್ಯಕೀಯ ಶಿಬಿರದ ವ್ಯವಸ್ಥೆ ಮಾಡಿ ಅಗತ್ಯವಿರುವ ಔಷಧಿ, ಮುಲಾಮು, ಸ್ಪ್ರೇ ಬ್ಯಾಂಡೇಜ್ ಇತ್ಯಾದಿಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ.
ಚಾರ್ಮಾಡಿ ಸೇರಿದಂತೆ ಮುಂಡಾಜೆ, ಧರ್ಮಸ್ಥಳ, ಬೂಡುಜಾಲು, ಎಸ್.ಡಿ.ಎಂ ಡಿಎಡ್ ಕಾಲೇಜು ಇಲ್ಲಿ ಪಾದಯಾತ್ರಿಗಳಿಗೆ ಆರೋಗ್ಯ ಶಿಬಿರ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಪಾದಯಾತ್ರಿಗಳಿಗೆ ತುರ್ತು ಆರೋಗ್ಯ ಸೇವೆ ನೀಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.

p>

LEAVE A REPLY

Please enter your comment!
Please enter your name here