ಬೆಳ್ತಂಗಡಿ : ಪ್ರಚೋದನಕಾರಿ ಮಾತುಗಳಿಂದ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡುವ ಭಾಷಣ ಮಾಡಿದ ಶರಣ್ ಪಂಪ್‌ವೆಲ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜ.೩೧ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೆಳ್ತಂಗಡಿ ಪೋಲಿಸ್ ಠಾಣೆಗೆ ದೂರು ನೀಡಲಾಯಿತು.
ಇತ್ತೀಚೆಗೆ ಬಜರಂಗದಳದ ಮುಖಂಡ ಶರಣ್ ಪಂಪ್‌ವೆಲ್ ಮಾಡಿದ ಭಾಷಣವೊಂದರಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್‌ನ ಫಾಝಿಲ್ ಕೊಲೆಯನ್ನು ನಮ್ಮ ಹುಡುಗರು ಶೌರ್ಯದಿಂದ ಮಾಡಿದ್ದು ಎಂದು ಎಲ್ಲರ ಎದುರೇ ಸಾರ್ವಜನಿಕವಾಗಿ ಹೇಳಿದ್ದಾರೆ. ಇದು ನಮ್ಮ ಯುವಕರ ಶೌರ್ಯ,ತಾಕತ್ತು ಎಂದು ಹೇಳುತ್ತಾ ಇನ್ನು ಮುಂದೆ ಇಂತಹ ದಾಳಿಗಳು ಇನ್ನಷ್ಟು ನಡೆಯಲಿವೆ ಎಂದು ಹೇಳಿದ್ದಾರೆ. ಇದು ತೀರಾ ಆತಂಕಕಾರಿ ಬೆಳವಣಿಗೆ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿ ನಾಗರಿಕ ಸಮಾಜದಲ್ಲಿ ಭೀತಿಯನ್ನು ಉಂಟು ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಶರಣ್ ಪಂಪ್‌ವೆಲ್‌ನ ಈ ಅತಿರೇಕದ ದ್ವೇಷ ಭಾಷಣ ಕೊಲೆಗಳ ಸಮರ್ಥನೆ, ಬೆದರಿಕೆ, ಜನಾಂಗೀಯ ಹತ್ಯೆಗೆ ಪ್ರಚೋದನೆ ನೀಡುವಂತಿದೆ. ಇದು ಚುನಾವಣಾ ಸನಿಹದಲ್ಲಿರುವ ಸಂದರ್ಭ ಮತೀಯ ಧ್ರುವೀಕರಣ, ರಾಜಕೀಯ ದುರುದ್ದೇಶಗಳನ್ನು ಹೊಂದಿದೆ. ಕೊಲೆ,ನರಮೇಧದ ಸಮರ್ಥನೆಯ ಭಾಷಣಕ್ಕಾಗಿ ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಆತನನ್ನು ಕಠಿಣ ಕಾಯ್ದೆಯಡಿಯಲ್ಲಿ ಬಂಧಿಸಿ, ರಾಜ್ಯದಿಂದಲೇ ಗಡಿಪಾರು ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಅಧ್ಯಕ್ಷರಾದ ಶೈಲೇಶ್ ಕುಮಾರ್, ರಂಜನ್ ಗೌಡ, ಕೆ.ಪಿ.ಸಿ.ಸಿ. ಕಾರ್ಮಿಕ ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿಯಾದ ಅಬ್ದುಲ್ ರಹಿಮಾನ್ ಪಡ್ಪು, ಬಿ.ಎಮ್. ಹಮೀದ್, ಅಶ್ರಫ್ ನೆರಿಯ, ಯು .ಎ.ಹಮೀದ್,ಬಿ.ಕೆ.ವಸಂತ ,ಖಾಲಿದ್ ಕಕ್ಯಾನ, ಅಭಿನಂದನ್ ಹರೀಶ್ ಕುಮಾರ್, ಮೆಹಬೂಬ್ ಬೆಳ್ತಂಗಡಿ, ಅಬ್ದುಲ್ ಕರೀಮ್ ಗೇರುಕಟ್ಟೆ , ನೇವಿರಾಜ್ ಕಿಲ್ಲೂರು, ಚಂದು.ಎಲ್, ಭರತ್ ಕುಮಾರ್, ಪ್ರಭಾಕರ ನಲಿಕೆ, ಜಗದೀಶ್ ಬೆಳ್ತಂಗಡಿ, ಎಂ.ಕೆ. ಜಯಾನಂದ ಸವಣಾಲು, ಉಮರಬ್ಬ ನೆರಿಯ ಹಾಜರಿದ್ದರು