ಜನ ಸಾಮಾನ್ಯರಿಗೆ ಹಿಂಸೆ ನೀಡುತ್ತಿರುವ ಮೂಡಾದ ಕಠಿಣ ನಿಬಂಧನೆಗಳು-ಸ್ವಂತ ಸ್ಥಳವಿದ್ದರೂ ಮನೆ ನಿರ್ಮಿಸಲು ಭಾಗ್ಯವಿಲ್ಲದೆ ಕಂಗಾಲಾದ ನಾಗರಿಕರು

0

ವರದಿ: ಕಾಸಿಂ ಪದ್ಮುಂಜ

ಬೆಳ್ತಂಗಡಿ: ತಾಲೂಕಿನ ಗ್ರಾಮಸ್ಥರು ಮೂಡಾ ಪ್ರಾಧಿಕಾರದ ಕಠಿಣ ನಿಬಂಧನೆಗಳಿಂದ ಆರ್ಥಿಕವಾಗಿಯೂ ಮಾನಾಸಿಕವಾಗಿಯೂ ಹಿಂಸೆ ಅನುಭವಿಸುತ್ತಿರುವುದು ಕಂಡು ಬಂದಿದೆ.
ಹಿಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಗುತ್ತಿದ್ದ 9/11 ಈಗ ಮೂಡಕ್ಕೆ ನೀಡಲಾಗಿದೆ. ಮೂಡಾದ ಅಧಿಕಾರಿಗಳು ವಾರಕ್ಕೊಂದು ಸಲ ಮಾತ್ರ ತಾಲೂಕು ಪಂಚಾಯತಗೆ ಬರುತ್ತಾರೆ. ವಾರಕ್ಕೊಂದು ಸಲ ತಾಲೂಕಿಗೆ ಬಂದರೆ ತಾಲೂಕಿನ 81 ಗ್ರಾಮದ ಗ್ರಾಮಸ್ಥರ ಕಡತ ವಿಲೇವಾರಿ ನಡೆಸಲು ಸಾಧ್ಯವಿಲ್ಲ. ವಾರದಲ್ಲಿ 25 ಮಂದಿಗೆ ಟೋಕನ್ ನೀಡಲಾಗುತ್ತದೆ. ತಾಲೂಕು ಪಂಚಾಯತಿ ಕಛೇರಿ 9.30-10 ಗಂಟೆಗೆ ತೆರೆಯುವುದಾದರೆ ಜನಸಾಮಾನ್ಯರು ಟೋಕನ್ ಪಡೆಯಲು ಬೆಳಗ್ಗಿನ ಜಾವ ಐದುವರೆ ಗಂಟೆಗೆ ತಾಲೂಕು ಪಂಚಾಯತ್ ಕಚೇರಿ ಎದುರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವುದು ಕಂಡು ಬಂದಿದೆ.

ಕಂದಾಯ ಇಲಾಖೆಯವರು ಕ್ರಷಿ ಭೂಮಿಯನ್ನು ವಸತಿ ಯಾ ವಾಣಿಜ್ಯ ಭೂಮಿಯಾಗಿ ಪರಿವರ್ತನೆ ಮಾಡಲು ಬೇಕಾದಷ್ಟು ಇಲಾಖೆಯ ನಿಯಮದಂತೆ ಹಲವಾರು ಕುಂದು ಕೊರತೆಗಳನ್ನು ನೀಗಿಸಿದ ನಂತರವೇ ಭೂ ಪರಿವರ್ತನೆ ಮಾಡುತ್ತಾರೆ. ಆದರೆ ಕಂದಾಯ ಇಲಾಖೆ ಮಾಡಿದ ಭೂ ಪರಿವರ್ತನಾ ಸ್ಥಳವನ್ನು ಮೂಡಾದ ನಿಯಮ ಮಾನ್ಯ ಮಾಡುವುದಿಲ್ಲ. ಅವರು ಮುದದಿಂದಲೇ ಅದನ್ನು ಕೆದಕುತ್ತಾರೆ. ಓರ್ವ ವ್ಯಕ್ತಿಗೆ ಒಂದು ಕಡೆಯಲ್ಲಿ ಸ್ವಂತ ಸ್ಥಳ ಇದೆ ಎಂದಾದರೆ ಅವನ ಸ್ಥಳಕ್ಕೆ ಬೇರೆಯವರ ಸ್ಥಳ ದಾಟಿ ಹೋಗುವುದು ಸಾಮಾನ್ಯವಾಗಿದೆ. ಒಬ್ಬರು ಮತ್ತೊಬ್ಬರ ಸ್ಥಳ ದಾಟಿ ಹೋಗುವುದು ಅನಿವಾರ್ಯ ಕೂಡ ಆದರೆ ಪರಸ್ಪರ ಯಾವುದೇ ತಕರಾರಿಲ್ಲದೆ ಒಪ್ಪಿಗೆಯಿಂದಲೇ ಹಾದು ಹೋಗುವುದಾಗಿದೆ. ಆದರೆ ಮೂಡಾದ ಕಠಣ ನಿಬಂಧನೆಗಳ ಪ್ರಕಾರ ಓರ್ವರ ಸ್ಥಳಕ್ಕೆ ಮತ್ತೋರ್ವರ ಸ್ಥಳದಿಂದ ಹಾದು ಹೋಗುವುದಾದಲ್ಲಿ ಮತ್ತೋರ್ವ ಅವನ ಸ್ಥಳವನ್ನು ಇನ್ನೋರ್ವನಿಗೆ ಬೇಕಾಗಿ ಲಕ್ಷಾಂತರ ರೂಪಾಯಿ ಬೆಳೆಬಾಳುವ ಭೂಮಿಯನ್ನು ಗ್ರಾಮ ಪಂಚಾಯಿತಿಗೆ ಉಚಿತವಾಗಿ ಹಸ್ತಾಂತರ ಮಾಡಬೇಕು.

ಈ ರೀತಿ ಯಾರಾದರೂ ತನ್ನ ಸ್ವಂತ ಭೂಮಿಯನ್ನು ಹಸ್ತಾಂತರ ಮಾಡಲು ಒಪ್ಪುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಅವನು ಹಸ್ತಾಂತರ ಮಾಡದಿದ್ದಲ್ಲಿ 9/11ಗೆ ಅನುಮೋದನೆ ಸಿಗುವುದಿಲ್ಲ. ಅನುಮೋದನೆ ಸಿಗದಿದ್ದಲ್ಲಿ 9/11 ಆಗುವುದಿಲ್ಲ. 9/11 ಸಿಗದಿದ್ದಲ್ಲಿ ಮನೆ ನಿರ್ಮಿಸಲು ಪರವಾನಿಗೆ ಸಿಗುವುದಿಲ್ಲ. ಹಾಗೆಯೇ ಪಂಚಾಯತಿ ರಸ್ತೆ ವ್ಯಾಪ್ತಿಯಲ್ಲಿ 9/11ಗೆ ಅನುಮೋದನೆ ಸಿಗಬೇಕಾದರೆ ಮೂಡಾದ ಕಠಿಣ ನಿಬಂಧನೆಗಳ ಪ್ರಕಾರ ವಾಣಿಜ್ಯ ಭೂಮಿಗೆ ಗ್ರಾಮ ಪಂಚಾಯತಿ ರಸ್ತೆ 9.00 ಮೀಟರ್ ಬೇಕು ವಾಸ್ತವ್ಯ ಕಟ್ಟಡ ನಿರ್ಮಾಣಕ್ಕೆ 6.00 ಮೀಟರ್ ರಸ್ತೆ ಬೇಕು. ಪಂಚಾಯತಿ ರಸ್ತೆ ಎಲ್ಲಾದರೂ 9.00 ಮೀಟರ್ ಇರುತ್ತದೆಯೇ. 9 ಫೀಟ್ ಇರುವುದೇ ಕಷ್ಟ ಹೀಗಿರುವಾಗ ಮೂಡಾದ ಕಠಿಣ ನಿಬಂಧನೆಗಳ ಪ್ರಕಾರ ರಸ್ತೆ ಇಲ್ಲವಾದರೆ ಮನೆ ನಿರ್ಮಿಸಲು ಪರವಾನಿಗೆ ಸಿಗುವುದಿಲ್ಲ.

ಜನ ಸಾಮಾನ್ಯರು ಸಾಲ ಮಾಡಿ, ತನ್ನ ಪತ್ನಿ, ತಾಯಂದಿರ ಚಿನ್ನ ಅಡವಿಟ್ಟೋ ಮಾರಾಟ ಮಾಡಿಯೋ ಸ್ವಂತ ಸ್ಥಳ ಖರೀದಿ ಮಾಡಿದರೂ ಮೂಡಾದ ಕಠಿಣ ನಿಬಂಧನೆಗಳಿಂದ ಸ್ವಂತ ಮನೆ ನಿರ್ಮಿಸಲು ಭಾಗ್ಯವಿಲ್ಲದೆ ಆರ್ಥಿಕವಾಗಿಯೂ ಮಾನಸಿಕವಾಗಿಯೂ ಕೊರಗುತ್ತಿರುವುದು, ಶಾಪ ಹಾಕುತ್ತಿರುವುದು ಕಂಡು ಬರುತ್ತಿದೆ. ಸಂಬಂಧಿಸಿದ ಶಾಸಕರು ಸಹಿತ ಜನಪ್ರತಿನಿಧಿಗಳು ಒಮ್ಮೆಯಾದರೂ ಮೂಡಾದ ನಿಯಮಗಳನ್ನು ಪರಿಶೀಲನೆ ಮಾಡಿ ಸರ್ಕಾರದ ಗಮನ ಸೆಳೆದು ಮೂಡಾದ ಕಠಿಣ ನಿಬಂಧನೆಗಳನ್ನು ಸಡಿಲಗೊಳಿಸಿ ಗ್ರಾಮ ಪಂಚಾಯತಿಯಲ್ಲಿಯೇ ಹಿಂದಿನಂತೆ ಮನೆ ನಿರ್ಮಿಸಲು 9/11 ಪರವಾನಿಗೆ ದೊರೆಯುವಂತೆ ಮಾಡುವುದು ಅತ್ಯಗತ್ಯವಾಗಿದೆ ಎಂದು ಆಗ್ರಹ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here