


ಬೆಳ್ತಂಗಡಿ: ಕುತ್ಲೂರು ಗ್ರಾಮದ ಮಂಜುಶ್ರೀ ನಗರದಲ್ಲಿರುವ ಶ್ರೀ ಅನಘ ಎಂಬಲ್ಲಿನ ನಿವಾಸಿ ಶಿಕ್ಷಕ ಅವಿನಾಶ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಒಡೆದು ೯.೫ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೇಣೂರು ಠಾಣಾ ಪೊಲೀಸರು ಅಂತರರಾಜ್ಯ ಕಳ್ಳ ಇತ್ತೆಬರ್ಪೆ ಅಬೂಬಕ್ಕರ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಚಿಕ್ಕಮಗಳೂರು ತಾಲ್ಲೂಕಿನ ವಾಟರ್ ಟ್ಯಾಂಕ್ ಸಮೀಪದ ಉಪ್ಪಳ್ಳಿ ನಿವಾಸಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬಕ್ಕರ್ ೯೦ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಕುತ್ಲೂರಿನ ಅವಿನಾಶ್ ಮತ್ತು ಅವರ ಮನೆಯವರು ಅ. ೨ರಂದು ಮನೆಗೆ ಬೀಗ ಹಾಕಿ ಹೋಗಿದ್ದವರು ಅ.೬ರಂದು ಬಂದು ನೋಡಿದಾಗ ಮನೆಯ ಬೀಗ ಒಡೆದು ಕಳ್ಳತನವಾಗಿರುವುದು ಕಂಡು ಬಂದಿತ್ತು.
ಮನೆಯೊಳಗೆ ಪ್ರವೇಶಿಸಿದ್ದ ಕಳ್ಳರು ಬೆಡ್ ರೂಮಿನ ಕಪಾಟಿನ ಬೀಗ ಒಡೆದು ಅದರೊಳಗೆ ಇಟ್ಟಿದ್ದ ಎರಡೆಳೆಯ ಚಿನ್ನದ ಕರಿಮಣಿ ಸರ, ಮುತ್ತಿನ ಸರ, ಚಿನ್ನದ ಬ್ರಾಸ್ ಲೈಟ್, ಮಕ್ಕಳ ಎರಡು ಸರಗಳು, ಒಂದು ಉಂಗುರ, ಒಂದು ಬೆಂಡೋಲೆ, ಚಿನ್ನದ ಉಂಗುರಗಳು ಸೇರಿದಂತೆ ಸುಮಾರು ೧೪೯ ಗ್ರಾಂ. ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ವೇಣೂರು ಠಾಣಾ ಪೊಲೀಸರು ಕಳವು ಕೃತ್ಯ ನಡೆಸಿದ್ದವರಿಗಾಗಿ ಶೋಧ ನಡೆಸಿದ್ದರು.


ಇತ್ತೆ ಬರ್ಪೆ ಅಬೂಬಕ್ಕರ್ ಈ ಕಳವು ಕೃತ್ಯ ನಡೆಸಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ನ.೧೨ರಂದು ಆತನನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯದ ಅಧಿಕ ಸಿಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಎಪಿಪಿ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ಆರೋಪಿಯ ಮೇಲೆ ವಿವಿಧ ಠಾಣೆಯಲ್ಲಿ ೫೦ಕ್ಕೂ ಹೆಚ್ಚು ಕೇಸ್ ಗಳಿವೆ. ಆತ ಜಾಮೀನು ಪಡೆದು ಹೊರಬಂದ ಕೂಡಲೇ ಅದೇ ಅಪರಾಧವನ್ನು ಎಸಗುತ್ತಾನೆ. ಕುತ್ಲೂರು ಪ್ರಕರಣದಲ್ಲಿ ಚಿನ್ನಾಭರಣ ಸ್ವಾದೀನ ಪಡಿಸಿಕೊಳ್ಳಬೇಕಿದೆ. ಅಲ್ಲದೇ ಆರೋಪಿಯ ಜೊತೆಗಿರುವವರು ಯಾರು ಎಂದು ಪತ್ತೆ ಹಚ್ಚಬೇಕಿದೆ. ಅದಕ್ಕಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವುದು ಅಗತ್ಯವಿದೆ ಎಂದು ವಾದಿಸಿದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರಾದ ವಿಜಯೇಂದ್ರ ರವರು ಆರೋಪಿಯನ್ನು ನವೆಂಬರ್ ೧೫ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.
ಯಾರಿವನು ಇತ್ತೆ ಬರ್ಪೆ ಅಬೂಬಕ್ಕರ್: ಇತ್ತೆ ಬರ್ಪೆ ಅಬೂಬಕ್ಕರ್ ಕಳ್ಳತನದಲ್ಲಿ ಎತ್ತಿದ ಕೈ ಎಂದು ಕುಖ್ಯಾತಿ ಪಡೆದಿದ್ದಾನೆ. ಈಗ ವಯಸ್ಸು ೬೫ ದಾಟಿದ್ದರೂ ನಿರಂತರವಾಗಿ ಇಂತಹ ಕಳ್ಳತನದಲ್ಲಿ ಭಾಗಿಯಾಗುತ್ತಿದ್ದಾನೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತ್ಯಧಿಕ ಕಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಬೂಬಕ್ಕರ್ ಯಾರೇ ಸಿಕ್ಕರೂ ತುಳುಭಾಷೆಯಲ್ಲಿ ಇತ್ತೆ ಬರ್ಪೆ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ಅಲ್ಲದೆ ತನ್ನ ದ್ವಿಚಕ್ರ ವಾಹನದಲ್ಲೂ ಇತ್ತೆ ಬರ್ಪೆ ಎಂದು ಸ್ಟಿಕ್ಕರ್ ಹಾಕಿಸಿಕೊಂಡಿದ್ದರಿಂದ ಈತನನ್ನು ಇತ್ತೆ ಬರ್ಪೆ ಅಬೂಬಕ್ಕರ್ ಎಂದೇ ಕರೆಯುತ್ತಾರೆ.
ಬಂಟ್ವಾಳ, ಪುತ್ತೂರು, ಕಾರ್ಕಳ, ಉಡುಪಿ, ಚಿಕ್ಕಮಗಳೂರು, ಮಂಗಳೂರು, ಸುರತ್ಕಲ್ ಮೂಡಬಿದ್ರೆ ಮುಂತಾದ ಕಡೆಗಳಲ್ಲಿ ೮೦ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಕೇರಳ ರಾಜ್ಯದಲ್ಲಿಯೂ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಜೂ.೨೭ರಂದು ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಪವಿತ್ರ ಪೂಜಾರ್ತಿ ಎಂಬವರ ಮನೆಗೆ ನುಗ್ಗಿದ ಕಳ್ಳರು ೧೨,೭೫,೦೦೦ರೂ. ಮೌಲ್ಯದ ಸುಮಾರು ೧೩೭ ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈತನನ್ನು ಬಂಧಿಸಿ ೬೬.೭೬೦ ಗ್ರಾಂ ತೂಕದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಶಪಡಿಸಿಕೊಳ್ಳಲಾಗಿತ್ತು. ಈಗ ಕುತ್ಲೂರು ಪ್ರಕರಣದಲ್ಲಿ ಇತ್ತೆಬರ್ಪೆ ಅಬೂಬಕ್ಕರ್ ಪೊಲೀಸ್ ಬಲೆಗೆ ಬಿದ್ದಿದ್ದಾನೆ.





