


ಬೆಳ್ತಂಗಡಿ: ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ನೇತೃತ್ವದಲ್ಲಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಹಕಾರದಿಂದ ನಡೆಸುತ್ತಿರುವ ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿರುವ ಲಿಂಗ ಸಮಾನತಾ ಪ್ರೇರಕ ತಂಡದ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿಯನ್ನು ಬೆಳ್ತಂಗಡಿ ಜ್ಞಾನ ನಿಲಯದಲ್ಲಿ ನ. 10ರಂದು ಆಯೋಜಿಸಲಾಗಿತ್ತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಿನಿ ರಾಜ್ಯ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜೋನ್ ವಹಿಸಿದ್ದರು. ಉದ್ಘಾಟನೆಯನ್ನು ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಫಾ. ಬಿನೋಯಿ ಎ.ಜೆ. ನೆರವೇರಿಸಿದರು. ಕ್ರಾಸ್ ಸಂಸ್ಥೆಯ ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕ ರಾಜಶೇಖರ್ ಅವರು ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಸಂಪದ ಸಂಸ್ಥೆಯ ಸಂಯೋಜಕ ಸ್ಟ್ಯಾನ್ಲಿ ಫೆರ್ನಾಂಡಿಸ್ ರವರು ಲಿಂಗ ಸಮಾನತೆ ಬಗ್ಗೆ ತಿಳಿದುಕೊಂಡು ಕುಟುಂಬ ಮತ್ತು ಸಮೂದಾಯದ ಬೆಳವಣಿಗೆಗೆ ಶ್ರಮಿಸಬೇಕು, ಬದಲಾವಣೆಗಳು ನಮ್ಮಿಂದ ಆಗಬೇಕು, ಮಕ್ಕಳನ್ನು ಗಂಡು ಮತ್ತು ಹೆಣ್ಣು ಎಂಬ ಭೇದವಿಲ್ಲದೆ ಸಮಾನವಾಗಿ ಬೆಳೆಸಬೇಕು, ಆಗ ಮಾತ್ರ ಘನತೆ ಮತ್ತು ಗೌರವದ ಜೀವನ ನಡೆಸಲು ಸಾಧ್ಯ ಎಂಬ ಬಗ್ಗೆ ತರಬೇತಿಯನ್ನು ನೀಡಿದರು.

ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಎಲಿಯಮ್ಮ ತೋಮಸ್ ಎಲ್ಲರನ್ನು ಸ್ವಾಗತಿಸಿದರು. ಯೋಜನಾ ಸಂಯೋಜಕಿ ಸಿಸಿಲ್ಯಾ ತಾವ್ರೋ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಲಿಂಗ ಸಮಾನತಾ ಪ್ರೇರಕ ತಂಡದ ಸದಸ್ಯರು ಹಾಗೂ ಮಹಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಮಂಜುಳಾ ಎಲ್ಲರನ್ನು ವಂದಿಸಿದರು.









