ಪಟ್ಟೂರು: ಕಾನೂನು ಬಾಹಿರ ಮನೆ ಜಪ್ತಿ- ತಪ್ಪಿತಸ್ಥ ಅಧಿಕಾರಿ ಮೇಲೆ ಕ್ರಮಕ್ಕೆ ಬೆಳ್ತಂಗಡಿ ಮುಸ್ಲಿಂ ಒಕ್ಕೂಟ ಆಗ್ರಹ-ನೂತನ ಡಿ.ವೈ.ಎಸ್‌.ಪಿ. ಜೊತೆ ಮುಸ್ಲಿಂ ಮುಖಂಡರ ಮಾತುಕತೆ

0

ಬೆಳ್ತಂಗಡಿ: ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ, ಗೋ ವಧೆ ಕೇಸಿಗೆ ಸಂಬಂಧಪಡದ ಸಾರಮ್ಮ ಎಂಬವರ ಮನೆಯನ್ನು ತರಾತುರಿಯಲ್ಲಿ ಜಪ್ತಿ ಮಾಡಿ ಮಕ್ಕಳೂ ಸಹಿತ ಮನೆಯವರನ್ನು ಹೊರಹಾಕಿದ ಘಟನೆಯಲ್ಲಿ ತಪ್ಪಿತಸ್ಥ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಮುಖಂಡರು ಬೆಳ್ತಂಗಡಿ ಡಿ.ವೈ.ಎಸ್‌.ಪಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದರು.

ನ.10ರಂದು ಬೆಳ್ತಂಗಡಿ ಕಚೇರಿಯಲ್ಲಿ ತಾಲೂಕು ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ಡಿವೈಎಸ್‌ಪಿ ಸಿ.ಕೆ ರೋಹಿಣಿ ಜೊತೆ ನಡೆದ ಮಾತುಕತೆಯಲ್ಲಿ ಕೆಲವು ವಿಚಾರಗಳನ್ನು ಅವರ ಗಮನಕ್ಕೆ ತಂದು ಮುಕ್ತವಾಗಿ ಚರ್ಚಿಸಲಾಯಿತು.

ಗೋವಧೆ ಕಾನೂನು ಉಲ್ಲಂಘನೆ ಹೆಸರಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿ ಪೊಲೀಸರನ್ನು ಶುಕ್ರವಾರದ ಮಸೀದಿಯ ಪ್ರಾರ್ಥನೆಯ ಸಂದರ್ಭ ಕಳುಹಿಸಿ ಮಾಹಿತಿಯ ನೆಪದಲ್ಲಿ ಬೆದರಿಸುವಂತಹ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಈ‌ ಬಗ್ಗೆ ಸಮುದಾಯಕ್ಕೆ ಇರುವ ಆಕ್ರೋಶವನ್ನು ನೂತನ ಡಿವೈಎಸ್‌ಪಿ ಅವರ ಗಮನಕ್ಕೆ ತರಲಾಯಿತು. ಹೊರತಾಗಿ ಪೊಲೀಸ್ ಇಲಾಖೆಗೆ ನಮ್ಮ ಸಹಕಾರ ಇರುವುದಾಗಿ ಭರವಸೆ ನೀಡಿದರು. ಇಡೀ ಜಿಲ್ಲೆಯಲ್ಲಿ ಅಧಿಕೃತ ಪರವಾನಿಗೆ ಸಹಿತದ ಕಸಾಯಿ ಖಾನೆಗಳು ಇಲ್ಲದೇ ಇರುವುದರಿಂದ ಅಲ್ಲಲ್ಲಿ ಇಂತಹಾ ಅಕ್ರಮಗಳಿಗೆ ಎಡೆಯಾಗಿದೆ. ಈ‌ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಂಡು ತಾಲೂಕಿಗೊಂದು ಸಕ್ರಮ ಕಸಾಯಿಖಾನೆ ಮಂಜೂರುಗೊಳಿಸಬೇಕು. ಅಲ್ಲಿ ನಿಯಮದ‌ ವ್ಯಾಪ್ತಿಯಲ್ಲಿ ವ್ಯವಹಾರ ನಡೆದರೆ ಯಾವುದೇ ಗೊಂದಲಗಳಿಗೆ ಅವಕಾಶವೇ ಇರುವುದಿಲ್ಲ ಎಂದು ಅಧಿಕಾರಿಗಳ ಗಮನಸೆಳೆಯಲಾಯಿತು.

ನಿಯೋಗದ ಒಟ್ಟು ವಿಚಾರಗಳ‌ ಬಗ್ಗೆ ಪ್ರತಿಕ್ರಿಯಿಸಿದ ಡಿ.ವೈ.ಎಸ್‌.ಪಿ. ಸಿ.ಕೆ. ರೋಹಿಣಿ ಅವರು, ಈ ರೀತಿಯ ಪರಸ್ಪರ ಸಂವಹನ ಮಾರ್ಗದಿಂದ ಅನೇಕ ಸಮಸ್ಯೆಗಳು ಸಣ್ಣ ಮಟ್ಟದಲ್ಲೇ ಪರಿಹಾರವಾಗುತ್ತದೆ.
ನೀವು ಹೇಳಿರುವ ಅಂಶಗಳನ್ನು ಗಮನಿಸಿಕೊಂಡು ಕ್ರಮವಹಿಸಲಾಗುವುದು. ಕಾನೂನು ಸುವ್ಯವಸ್ಥೆಯ ದೃಷ್ಟಿಯಲ್ಲಿ ಒಳ್ಳೆಯ ಕೆಲಸ‌ಮಾಡಬೇಕು ಎಂಬ ಇರಾದೆಯಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ಎಲ್ಲರ ಸಹಕಾರ ಪಡೆದುಕೊಂಡು ಮುಂದುವರಿಯಲಾಗುವುದು ಎಂದರು.

ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್ ಅವರ ನೇತೃತ್ವದಲ್ಲಿ ನಡೆದ ಈ‌ ಮಾತುಕತೆಯಲ್ಲಿ ಪ್ರಮುಖರಾದ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಅಕ್ಬರ್ ಬೆಳ್ತಂಗಡಿ, ಅಶ್ರಫ್ ಆಲಿಕುಂಞಿ ಮುಂಡಾಜೆ, ಖಾಲಿದ್ ಪುಲಾಬೆ, ಅಬ್ದುಲ್ ರಹಿಮಾನ್ ಪಡ್ಪು, ನಿಸಾರ್ ಕುದ್ರಡ್ಕ, ನವಾಝ್ ಶರೀಫ್ ಪೆರಾಲ್ದರಕಟ್ಟೆ, ಅಝರ್ ನಾವೂರು, ಅಬ್ಬೋನು ಮದ್ದಡ್ಕ, ಕೆ.ಎಸ್ ಅಬ್ದುಲ್ಲ ಕರಾಯ, ಶಮೀಮ್ ಯೂಸುಫ್ ಮದ್ದಡ್ಕ, ಅಶ್ರಫ್ ಕಟ್ಟೆ, ಸಾಲಿಹ್ ಮದ್ದಡ್ಕ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here