ಬೆಳ್ತಂಗಡಿ: ಯುವ ವಿದ್ಯಾರ್ಥಿಗಳು ಯೌವ್ವನದ ಹುರುಪಿನಿಂದ ನಿಯಮ ಬಾಹಿರವಾಗಿ ನಡೆದುಕೊಳ್ಳುವುದರಿಂದ ಪ್ರಾಣಾಪಾಯ ಉಂಟಾಗಬಹುದು ಎಂದು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಿಂಗಪ್ಪ ಡಿ. ಚನ್ನಣ್ಣವರ್ ಹೇಳಿದರು.
ಅವರು ವಾಣಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುತ್ತಾ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಅತೀ ಅವಶ್ಯಕ. ಟ್ರಾಫಿಕ್ ಸಿಗ್ನಲ್ ಗಳು, ಜೀಬ್ರಾ ಕ್ರಾಸಿಂಗ್ ಮುಂತಾದ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ವಾಹನ ಚಲಾಯಿಸುವವರು ನಿರ್ದಿಷ್ಟ ದಾಖಲೆಗಳನ್ನು ಹೊಂದಿರಬೇಕು. ಅಲ್ಲದೆ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿಯನ್ನು ಹೊಂದಿರಬೇಕು. ಅಜ್ಞಾತ ಮೆಸೇಜ್, ಇಮೇಲ್, ಲಿಂಕ್ ಗಳಿಗೆ ಸ್ಪಂದನೆ ನೀಡಬಾರದು ಎಂದರು. ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ದಿನೇಶ್ ಗೌಡ ಸ್ವಾಗತಿಸಿದರು. ಸಹಕಾರ್ಯಕ್ರಮಾಧಿಕಾರಿ ಶ್ರಾವ್ಯ ಎಸ್. ಕಾರ್ಯಕ್ರಮ ನಿರೂಪಿಸಿದರು.