
ಪಟ್ಟೂರು: “ಭಾರತವು ಸರ್ವಶಕ್ತವಾಗಲು, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ದೇಶದ ಮೇಲೆ ಪ್ರೀತಿ, ಗೌರವ ಮತ್ತು ನಿಷ್ಠೆಯನ್ನು ಬೆಳೆಸಿಕೊಳ್ಳಬೇಕು”. ಶಾಲೆಯಲ್ಲಿ ನೀಡುವ ಪ್ರೇರಣಯೂ ದೇಶ ಕಟ್ಟಲು ದಾರಿಯಾಗುತ್ತದೆ ಎಂದು ಪ್ರಗತಿಪರ ಕೃಷಿಕ ಹಾಗೂ ನೆಲ್ಯಾಡಿಯ ಕ್ಷಿತಿ ಆಗ್ರೋ ಎಂಟರ್ಪ್ರೈಸಸ್ ಮಾಲಕ ಸಮಂತ್ ಜೈನ್ ನುಡಿದರು. ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನಾಡಿದರು.
ಧ್ವಜಾರೋಹಣವನ್ನು ಕೊಕ್ಕಡದ ಪಂಚಮಿ ಹಿತಾಯುರ್ಧಾಮದ ವೈದ್ಯೆ ಡಾ. ತಾರಾ ಗಣೇಶ್ ನೆರವೇರಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಜನಾರ್ಧನ ಕಜೆ ಮಾತನಾಡಿ, ಭವ್ಯ ಭಾರತ ನಿರ್ಮಾಣದಲ್ಲಿ ಯುವಜನರ ಪಾತ್ರ ಅಪ್ರತಿಮ. ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶಭಕ್ತರಾಗಿ ಬೆಳೆವುದೇ ನಿಜವಾದ ಸ್ವಾತಂತ್ರ್ಯದ ಸಾರ್ಥಕತೆ” ಎಂದರು.
ವೇದಿಕೆಯಲ್ಲಿ ಶಾಲಾ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ, ಕೋಶಾಧಿಕಾರಿ ಗಣೇಶ್ ಕೆ, ಪಟ್ಟೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯ ದೇವಚಂದ್ರ ಮೊಟ್ಟಿಕಲ್ಲು, ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಗನ್ಯಶ್ರೀ ಸ್ವಾಗತಿಸಿ, ನವ್ಯ ನಿರೂಪಿಸಿದರು. ವಿದ್ಯಾರ್ಥಿ ಯಶ್ಮಿತ್ ವೈ. ದಾಮಲೆ ಸ್ವಾತಂತ್ರ್ಯೋತ್ಸವದ ಸಂದೇಶದೊಂದಿಗೆ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಪೋಷಕರು, ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಾಂದ್ರ ಎ. ಎಸ್. ವಂದಿಸಿದರು.