ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಆನಂದ್ ಕೆ. ಸಹಿತ ೧೩ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಎರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ|ಆನಂದ್ ಕೆ.ರವರನ್ನು ವಿಜಯಪುರ ಜಿಲ್ಲಾಧಿಕಾರಿಯಾಗಿ ನೇಮಿಸಿ ವರ್ಗಾವಣೆಗೊಳಿಸಲಾಗಿದೆ. ಡಾ|ಆನಂದ್ ಕೆ.ರವರ ವರ್ಗಾವಣೆಯಿಂದ ತೆರವಾದ ಜಿ.ಪಂ ಸಿಇಒ ಹುದ್ದೆಗೆ ಮಡಿಕೇರಿ ಉಪವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿದ್ದ ೨೦೨೧ರ ಬ್ಯಾಚ್ನ ಐಎಎಸ್ ಅಧಿಕಾರಿ ನರ್ವಾಡೆ ವಿನಾಯಕ್ ಕರ್ಭಾರಿ ಅವರನ್ನು ನಿಯೋಜನೆ ಮಾಡಲಾಗಿದೆ.
೨೦೧೬ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಡಾ|ಆನಂದ್ರವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿ ಬಳಿಕ ಗದಗ ಜಿಲ್ಲಾ ಪಂಚಾಯತ್ ಸಿಇಒ ಆಗಿ ನಂತರ ದ.ಕ.ಜಿ.ಪಂ. ಸಿಇಒ ಆಗಿ ವರ್ಗಾವಣೆಗೊಂಡು ೨೦೨೩ರ ಜೂ.೩೦ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಡಾ|ಆನಂದ್ ಸೇರಿದಂತೆ ೬೫ ಐಎಎಸ್ ಅಧಿಕಾರಿಗಳಿಗೆ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಕಳೆದ ಜನವರಿ ತಿಂಗಳಿನಲ್ಲಿ ಭಡ್ತಿ ನೀಡಿ ಆದೇಶಿಸಲಾಗಿತ್ತು. ಆದರೆ ಭಡ್ತಿ ಹೊಂದಿದ್ದ ಡಾ|ಆನಂದ್ರವರು ಅದೇ ಹುದ್ದೆಯಲ್ಲಿಯೇ ಮುಂದುವರಿದಿದ್ದರು. ಇದೀಗ ವಿಜಯಪುರ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.