

ಕೊಕ್ಕಡ:ಏ. 14ರಂದು ಕೊಕ್ಕಡ ಸೇವಾ ಮಂದಿರದಲ್ಲಿ ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ ಹಾಗೂ ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಸಹಯೋಗದಲ್ಲಿ 5ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಪೋಷಕರಿಂದು ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿ ಮಕ್ಕಳು ತಮ್ಮ ಮಾತೃಭಾಷೆಯನ್ನೇ ಮರೆಯುವಂತೆ ಮಾಡುತ್ತಿದ್ದಾರೆ. ತಮ್ಮ ಶ್ರಮ ಹಾಗೂ ತಾವು ಪಡುವ ಕಷ್ಟ ಮಕ್ಕಳಿಗೆ ಗೊತ್ತಾಗಬಾರದು ಎನ್ನುವ ಪ್ರೀತಿಯಲ್ಲಿ ಪೋಷಕರಿಂದ ಮಕ್ಕಳನ್ನು ಬೆಳೆಸುತ್ತಿದ್ದು, ಮಕ್ಕಳಿಗೆ ಕಷ್ಟದ ಅರಿವೇ ಇಲ್ಲದಂತಾಗಿದೆ. ಕುಟುಂಬ ವ್ಯವಸ್ಥೆ ಬದಲಾದಂತೆ ಸಮಾಜವು ಬದಲಾಗಿದೆ. ರಾಮಾಯಣ ಮಹಾಭಾರತಂತಹ ಮೂಲಭೂತ ಸಂಗತಿಗಳನ್ನು ಮಕ್ಕಳಿಗೆ ತಿಳಿಸದೇ ಹೋದಲ್ಲಿ ಭವಿಷ್ಯ ಬರಡಾದಿತು. ಬೆಳೆಯುತ್ತಿರುವ ಮಕ್ಕಳಿಗೆ ಸಾಮಾಜಿಕ ಸಾಮರಸ್ಯ, ಪರ್ಯಾವರಣ್, ಕುಟುಂಬ ಪ್ರಬೋಧನಂತಹ ವಿಚಾರಧಾರೆಗಳನ್ನು ತಿಳಿಸಿದಾಗ ಮಾತ್ರವೇ ಮೂಲ ಸಂಸ್ಕೃತಿಗಳನ್ನು ಉಳಿಸಿಕೊಂಡು ಹೋಗಲು ಸಾಧ್ಯ ಎಂದು ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಮನೋಜ್ ನುಡಿದರು.
.
ಸಮಾರೋಪ ಭಾಷಣ ಮಾಡಿದ ಬೆಳ್ತಂಗಡಿ ಸಂಸ್ಕಾರ ಭಾರತೀಯ ಅಧ್ಯಕ್ಷ ಸಂಪತ್ ಸುವರ್ಣ ಸಮಾಜದಲ್ಲಿ ಶಿಕ್ಷಣವಂತರು ಅನೇಕರು ಇರಬಹುದು ಆದರೆ ಸಂಸ್ಕಾರವಂತರು ಸಿಗುವುದು ವಿರಳ. ಶ್ರೀರಾಮ ವಿದ್ಯಾಸಂಸ್ಥೆಯಂತಹ ಸಂಸ್ಥೆಗಳು ಮಕ್ಕಳನ್ನು ಸಂಸ್ಕಾರಯುಕ್ತ ಮಕ್ಕಳಾಗಿ ಪರಿವರ್ತಿಸುತ್ತಿರುವುದು ಶ್ಲಾಘನೀಯ. ಇಂದು ಸಾಮಾನ್ಯ ವ್ಯಕ್ತಿಯಲ್ಲಿರುವ ಕಾಳಜಿ, ಯೋಚನೆ, ಚಿಂತನೆ ವಿದ್ಯಾವಂತ ಸಮಾಜದಲ್ಲಿ ಇಲ್ಲದೆ ಇರುವುದು ವಿಷಾದನೀಯ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ಭಾರತವು ಬರೆಯ ದೇಶವಲ್ಲ, ಅನೇಕ ಅಸಮಾನ್ಯ ಸಂಗತಿಗಳ, ಕೃಷಿ ಪದ್ಧತಿಗಳ ತವರೂರಾಗಿದೆ. ಜೀವನದಲ್ಲಿ ಬರುವ ಅನೇಕ ತಿರುವುಗಳಲ್ಲಿ ನಮ್ಮನ್ನು ನಾವು ಬಲಿಷ್ಠರಾಗಿಸಲು, ಸದೃಢಗೊಳಿಸಿಕೊಳ್ಳಲು, ಸಶಕ್ತರಾಗಲು ಒಂದು ಮನೋ ಭೂಮಿಕೆಯನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಕುಶಾಲಪ್ಪ ಗೌಡ ಪೂವಾಜೆ ವಹಿಸಿದ್ದರು. ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಬಳಿಕ ಶಿಬಿರದಲ್ಲಿ ಸಹಕರಿಸಿದ ಶ್ರೀರಾಮ ವಿದ್ಯಾಸಂಸ್ಥೆಯ ಎಲ್ಲ ಶಿಕ್ಷಕ, ಶಿಕ್ಷಕಿಯರಿಗೂ ಗೌರವಾರ್ಪಣೆ ಸಲ್ಲಿಸಲಾಯಿತು.
ಶ್ರೀ ರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ನೈಮಿಷ ಸ್ವಾಗತಿಸಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ಹಿಟ್ಟಿಲು ಪ್ರಾಸ್ತಾವಿಕವಾಗಿ ನುಡಿದರು. ಶಿಬಿರಾರ್ಥಿ ಯೋಕ್ಷ ವೈಯಕ್ತಿಕ ಗೀತೆ ಹಾಡಿದರು. ಕೇಶವ ಹಳ್ಳಿಂಗೇರಿ ಕಾರ್ಯಕ್ರಮ ನಿರೂಪಿಸಿದರು. 5 ದಿನಗಳ ಕಾಲ ನಡೆದ ಶಿಬಿರದಲ್ಲಿ ಯೋಗ, ಭಗವದ್ಗೀತೆ ಪಠಣ, ಚಿತ್ರಕಲೆ ಮತ್ತು ಕ್ರಾಫ್ಟ್, ಕಥಾ ಅವಧಿ, ಗಮಕ ಪ್ರಾತ್ಯಕ್ಷಿಕೆ, ರಸಪ್ರಶ್ನೆ, ವಿಡಿಯೋ ಮೂಲಕ ಕಥಾ ವಿವರಣೆ, ವಿದ್ಯಾರ್ಥಿಗಳಲ್ಲಿ ನಾಯಕತ್ವ, ಪ್ರೇರಣಾದಾಯಿ ಡಾ. ಅಂಬೇಡ್ಕರ್, ವೀರ ಮರಾಠರು, ನಡವಳಿಕೆ ಶಿಕ್ಷಣ, ಅಭಿನಯ ಗೀತೆ, ಹಾಡು ಸೇರಿದಂತೆ ಅನೇಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.
ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್ ಮಾರ್ಗದರ್ಶನದಂತೆ ಶಿಬಿರ ಸಂಚಾಲಕರಾಗಿ ಸ್ವಾತಿ ಕೆ.ವಿ., ಸುಪ್ರೀತಾ ಎ., ಶ್ವೇತ ಕುಮಾರಿ ಎಂ. ಪಿ, ಭವ್ಯ ಪಿ. ಡಿ., ಶುಭಲಕ್ಷ್ಮಿ ಜವಾಬ್ದಾರಿ ನಿರ್ವಹಿಸಿದರು. ಶಾಲೆಯ ಸಹಶಿಕ್ಷಕರು, ಶಿಕ್ಷಕೇತರರು, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಹಾಗೂ ಶ್ರೀರಾಮ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸದಸ್ಯರು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಶ್ರೀರಾಮ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್ ವಂದಿಸಿದರು.