ಬೆಳ್ತಂಗಡಿ; ತಣ್ಣೀರುಪಂತ ಗ್ರಾಮದ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಪ್ರತಿಷ್ಠಾ ದಿನ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವವವು ಮಾ.13 ಮತ್ತು14 ರಂದು ಭಕ್ತಿ ಶ್ರದ್ಧೆಯ ಮೂಲಕ ನಡೆಯಲಿದೆ.
ಈ ಸಂಭ್ರಮದ ಜೊತೆಗೆ ಈ ಬಾರಿ ಉಡುಪಿಯ ಶೀರೂರು ವಾಮನತೀರ್ಥ ಸಂಸ್ಥಾನದ ಭಾವೀ ಪರ್ಯಾಯ ಪೀಠಾಧಿಪತಿ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆಗಮಿಸಿ ದಿವ್ಯ ಆಶೀರ್ವಚನ ನೀಡಲಿದ್ದಾರೆ.
ಮಾ.13 ರಂದು ಗಣಹೋಮದೊಂದಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಲಿದೆ.
ಕಲಶಾಭಿಷೇಕ, ನಾಗದೇವರಿಗೆ ಅಶ್ಲೇಷಾ ಬಲಿ, ತಂಬಿಲ, ದೈವಗಳಿಗೆ ತಂಬಿಲ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5 ಕ್ಕೆ ಶ್ರೀ ಸ್ವಾಮಿಗಳು ಪುರಪ್ರವೇಶಿಸಲಿದ್ದಾರೆ. ಅವರನ್ನು ಪೂರ್ಣಕುಂಭದ ಮೂಲಕ ಬರಮಾಡಿಕೊಂಡು ಯಥೋಚಿತ ಗೌರವ ನೀಡಲಾಗುವುದು. ಬಳಿಕ ಶ್ರೀಗಳಿಂದ ಮಂಗಳ ಆಶೀರ್ವಚನ ಹಾಗೂ ಮಂತ್ರಾಕ್ಷತೆ ನಡೆಯಲಿದೆ.
ರಾತ್ರಿ ದುರ್ಗಾ ಪೂಜೆ, ರಂಗ ಪೂಜೆ, ದೇವರ ಬಲಿ ಹೊರಟು ಧಾರ್ಮಿಕ ಕಾರ್ಯಗಳು ಮುಂದುವರಿಯಲಿದೆ.
ಮಾ.14 ರಂದು ಬೆಳಿಗ್ಗೆ 7.30 ರಿಂದಲೇ ಗಣಪತಿಹೋಮ, ದೇವರ ಬಲಿ ಹೊರಟು ಉತ್ಸವ ನಡೆಯಲಿದೆ. 11.00 ಕ್ಕೆ ದೇವರ ದರ್ಶನಬಲಿ ಹಾಗೂ ಬಟ್ಟಲು ಕಾಣಿಕೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ ಪ್ರಸಾದ ವಿತರಣೆ ನಡೆದು ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ ನೇಮೋತ್ಸವ ಕೂಡ ನಡೆಯಲಿದ್ದು ಜಾತ್ರೆಯ ಪ್ರಯುಕ್ತ ರಾತ್ರಿ ಕೂಡ ಅನ್ನ ಸಂತರ್ಪಣೆ ಇರಲಿದೆ. ಮನೋರಂಜನೆಯ ಭಾಗವಾಗಿ ಮಾ.13 ರಂದು ಸಂಜೆ 7.00 ಕ್ಕೆ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಕಾರ್ಯಕ್ರಮ ವನ್ನೂ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.