ವೈಷ್ಣವಿ ಎಕ್ಸೆಸ್ ಕಾರ್ಗೋ ಎಂ.ಡಿ. ರಾಜೇಶ್ ಪ್ರಭುಗೆ ಜೀವ ಬೆದರಿಕೆ – ಬೆಳ್ತಂಗಡಿಯ ಹೆಡ್‌ಕಾನ್ಸ್‌ಟೇಬಲ್ ಪಳನಿವೇಲು ಅಮಾನತು

0

ಬೆಳ್ತಂಗಡಿ: ಮಂಗಳೂರಿನ ವೈಷ್ಣವಿ ಎಕ್ಸೆಸ್ ಕಾರ್ಗೋ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಶ್ ಪ್ರಭು ಅವರಿಗೆ ಪದೇ ಪದೇ ಫೋನ್ ಕರೆ ಮಾಡಿ ಜೀವ ಬೆದರಿಕೆ ಒಡ್ಡಿ ಅವಾಚ್ಯವಾಗಿ ನಿಂದಿಸಿದ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯ ಮುಖ್ಯಪೇದೆ ಪಳನಿವೇಲು ಎಂಬವರನ್ನು ಅಮಾನತುಗೊಳಿಸಲಾಗಿದೆ.

ರಾಜೇಶ್ ಪ್ರಭು ದೂರು-ಎಸ್ಪಿ ಯತೀಶ್ ಸ್ಪಂದನೆ-ಹೆಡ್‌ಕಾನ್ಸ್‌ಟೇಬಲ್ ಪಳನಿವೇಲು ಅಮಾನತು: ಮಂಗಳೂರಿನ ವೈಷ್ಣವಿ ಎಕ್ಸೆಸ್ ಕಾರ್ಗೋ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಶ್ ಪ್ರಭು ಅವರು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಮುಖ್ಯಪೇದೆ ಪಳನಿವೇಲು ವಿರುದ್ಧ ದೂರು ನೀಡಿದ್ದರು. ನಾನು ಮಂಗಳೂರು ಮತ್ತು ಮುಂಬೈಯಲ್ಲಿ ಉದ್ಯಮಿಯಾಗಿದ್ದು ಎರಡು ಪ್ರೈವೆಟ್ ಲಿಮಿಟೆಡ್ ಕಂಪೆನಿಗಳ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುತ್ತೇನೆ. ನನ್ನ ಹೆಂಡತಿಗೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯಲ್ಲಿ ಕೃಷಿ ಭೂಮಿ ಇರುತ್ತದೆ.
ಸದರಿ ಭೂಮಿಯ ವ್ಯವಹಾರದ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ಸಿವಿಲ್ ದಾವೆಯಿದೆ. ಇದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಹೀಗಿರುವಾಗ 18/03/2024ರಂದು ಬೆಳ್ತಂಗಡಿ ಠಾಣೆಯ ಮುಖ್ಯ ಪೇದೆ ಪಳನಿವೇಲು ನನಗೆ ಕರೆ ಮಾಡಿ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ನನಗೆ ನಿಮ್ಮನ್ನು ವಿಚಾರಣೆ ಮಾಡಿ ವರದಿ ಸಲ್ಲಿಸುವುದಕ್ಕೆ ಇರುತ್ತದೆ. ಹಾಗಾಗಿ ನಿಮ್ಮನ್ನು ಭೇಟಿಯಾಗಲು ಇದೆ ಎಂದು ಹೇಳಿದ್ದನು. ಅದರಂತೆ ನಾನು ನನ್ನ ಮನೆಯಿರುವ ಸ್ಥಳದ ಮಾಹಿತಿಯನ್ನು ಕಳಿಸಿಕೊಟ್ಟಿರುತ್ತೇನೆ. ಆಗ ಮನೆಗೆ ಬಂದ ಪಳನಿವೇಲುರವರು ನನ್ನನ್ನು ವಿಧ ವಿಧವಾಗಿ ಬೆದರಿಸಿ ನಿಮಗೆ ತೊಂದರೆಯಾಗದಂತೆ ವರದಿ ನೀಡುವ ಸಲುವಾಗಿ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ಅವರಿಗೆ 3 ಲಕ್ಷ ರೂಪಾಯಿಯನ್ನು ಕೊಡಬೇಕು ಎಂದು ಹೇಳಿರುತ್ತಾರೆ.

ಅವರು ಒತ್ತಾಯಪೂರ್ವಕವಾಗಿ ಪದೇ ಪದೇ ಕೇಳಿರುವ ಕಾರಣ ನಾನು ಮಾನಸಿಕವಾಗಿ ಕುಗ್ಗಿ ಹೋಗಿರುವ ಕಾರಣ ೫೦ ಸಾವಿರ ರೂಪಾಯಿ ಕೊಟ್ಟು ನನಗೆ ಯಾವುದೇ ತೊಂದರೆ ನೀಡದಂತೆ ಕೇಳಿಕೊಂಡಿರುತ್ತೇನೆ ಎಂದು ಎಸ್.ಪಿ.ಯವರಿಗೆ ನೀಡಿರುವ ದೂರಿನಲ್ಲಿ ತಿಳಿಸಿರುವ ರಾಜೇಶ್ ಪ್ರಭು ಅವರು ಇದಾದ ನಂತರವು ಸಹ ಒಂದು ಬಾರಿ ಫೋನ್ ಮಾಡಿ ನಮ್ಮ ಠಾಣೆಯಲ್ಲಿ ಇನ್ಸೆಕ್ಟರ್ ಸುಬ್ಬಾಪುರ್‌ಮಟ್ ವತಿಯಿಂದ ಪಾರ್ಟಿಯಿದ್ದು ಇದಕ್ಕಾಗಿ ಮದ್ಯದ ವ್ಯವಸ್ಥೆ ಮಾಡಿಕೊಡುವಂತೆ ಹೇಳಿದ್ದರು. ನಾನು ನನಗೆ ಪರಿಚಯದ ವೈನ್‌ಗೇಟ್‌ನಿಂದ ಮದ್ಯ ತೆಗೆದೊಯ್ಯುವಂತೆ ಹೇಳಿದ್ದು ಪಳನಿವೇಲು ಸುಮಾರು ೨೨ ಸಾವಿರ ರೂಪಾಯಿಯ ಮದ್ಯವನ್ನು ಕೊಂಡೊಯ್ದಿದ್ದಾರೆ. ಅದರ ಬಿಲ್ ನಮ್ಮ ಕಂಪೆನಿಯಿಂದ ಪಾವತಿಯಾಗಿರುತ್ತದೆ. ನಂತರದ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಬಳಿ ಸತ್ಯಸಾರ ಮುಪ್ಪಣ್ಣಾಯ ಭೂತದ ಕೋಲವಿರುವ ಸಂದರ್ಭ ಆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲು ಇಚ್ಛಿಸಿದ ಕಾರಣ ಈ ವಿಷಯವನ್ನು ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ಇವರಿಗೆ ಕರೆ ಮಾಡಿ ತಿಳಿಸಿರುತ್ತೇನೆ.

ಅನಂತರ ಕಾರ್ಯಕ್ರಮದ ಪೂರ್ವದಲ್ಲಿ ಪಳನಿವೇಲು ಅವರು ನನಗೆ ಕರೆ ಮಾಡಿ ಸಾರ್ವಜನಿಕ ಕಾರ್ಯಕ್ರಮದ ಸಂದರ್ಭ ಗಲಾಟೆಯಾಗುವ ಸಾಧ್ಯತೆಯಿದೆ, ಹಾಗಿರುವಾಗ ಅಲ್ಲಿ ತೊಂದರೆಯಾಗದಂತೆ ನೋಡುವ ಜವಾಬ್ದಾರಿಯನ್ನು ನಮಗೆ ವಹಿಸಿದ್ದಾರೆ. ಅದಕ್ಕಾಗಿ ನನಗೆ 30 ಸಾವಿರ ಕೊಡಬೇಕು ಎಂದು ಕೇಳಿರುತ್ತಾರೆ. ಆ ಸಂದರ್ಭದಲ್ಲಿ ನಾನು ನನ್ನ ಕುಟುಂಬದ ರಕ್ಷಣೆಗಾಗಿ ಪಳನಿವೇಲು ಅವರಿಗೆ ೧೫ ಸಾವಿರ ರೂಪಾಯಿ ಹಣವನ್ನು ಮತ್ತು 5 ಸಾವಿರ ರೂಪಾಯಿ ಮೌಲ್ಯದ ಮದ್ಯವನ್ನು ಅವರು ಹೇಳಿದಂತೆ ಕೊಟ್ಟಿರುತ್ತೇನೆ. ನಂತರ ದಿನಗಳಲ್ಲಿ ಈ ಎಲ್ಲ ವಿಷಯವನ್ನು ನನ್ನ ಹೈಕೋರ್ಟ್ ವಕೀಲರ ಬಳಿ ಹೇಳಿದಾಗ ನಿಮ್ಮ ಬಗೆಗಿನ ವರದಿಯನ್ನು ಮಾಹಿತಿ ಹಕ್ಕಿನಲ್ಲಿ ತೆಗೆಯಬೇಕು ಎಂದು ಸೂಚಿಸಿರುತ್ತಾರೆ. ಅದರಂತೆ ನನ್ನ ಬಗೆಗಿನ ವರದಿ ಬಗ್ಗೆ ವಿಚಾರಿಸುವ ಸಂದರ್ಭ ಬೆಳ್ತಂಗಡಿ ಮತ್ತು ಬಂಟ್ವಾಳ ಠಾಣೆಯಲ್ಲಿ ಈ ತರಹ ಯಾವುದೇ ವಿಚಾರಣೆ ನನ್ನ ಬಗ್ಗೆ ನಡೆದಿಲ್ಲ ಎಂದು ತಿಳಿದು ಬಂತು. ನಾನು ಈ ರೀತಿ ಮಾಹಿತಿ ಕೇಳಿರುವುದನ್ನು ಅರಿತುಕೊಂಡು ಪಳನಿವೇಲುರವರು 18/02/2025ರಂದು ನನಗೆ ಕರೆ ಮಾಡಿ ವರದಿಯ ಬಗ್ಗೆ ಯಾಕೆ ವಿಚಾರಿಸುತ್ತೀರಿ ಎಂದು ಕೇಳಿರುತ್ತಾರೆ.

ಆಗ ನನ್ನ ವಕೀಲರ ಸೂಚನೆಯ ಬಗ್ಗೆ ಹೇಳಿದಾಗ ವರದಿಯ ಬಗ್ಗೆ ವಿಚಾರಿಸಬೇಡಿ ಎಂದು ಹೇಳಿರುತ್ತಾರೆ. ಆದರೂ ನಾನು ವಿಚಾರಿಸತೊಡಗಿದಾಗ ೧೯ ತಾರೀಕಿನಿಂದ ದಿನವೂ ನನಗೆ ಹಲವಾರು ಬಾರಿ ವಾಟ್ಸಪ್ ಕರೆ ಮತ್ತು ಮೆಸೇಜ್ ಮಾಡಿರುತ್ತಾರೆ .ನಾನು ಅವರ ಕರೆಗಳನ್ನು ಸ್ವೀಕರಿಸದೇ ಇರುವಾಗ ನನ್ನ ಮನೆಗೆ ಬರುವುದಾಗಿ ಮತ್ತು ಸಾಧ್ಯವಿದ್ದರೆ ತಡೆಯುವಂತೆ ಬೆದರಿಸಿರುತ್ತಾರೆ. ನನ್ನನ್ನು ಪದೇ ಪದೇ ಪ್ರೇರೇಪಿಸಿ ಮಾತನಾಡಲು ಯತ್ನಿಸಿದಾಗಲೂ ನಾನು ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ಕರೆ ಮಾಡಿದ ಪ್ರತಿ ಸಂದರ್ಭದಲ್ಲೂ ಅವಾಚ್ಯ ರೀತಿಯಲ್ಲಿ ಬೈಯ್ದು ನಿಂದಿಸಿರುತ್ತಾರೆ. ಪಳನಿವೇಲು ಶನಿವಾರದ ದಿನ (22-02-2025) ಕರೆ ಮಾಡಿ ನನ್ನ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡಿರುತ್ತಾನೆ ಅಲ್ಲದೆ, ನನ್ನ ಮಗನನ್ನು ನಾನು ಕೊಂದಿರುವುದಾಗಿ ಆರೋಪಿಸಿ, ಮಗನನ್ನು ಕೊಂದ ಮೇಲೆ ಯಾಕೆ ಬದುಕಿದ್ದಿ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಣೆ ನೀಡಿರುತ್ತಾನೆ. ನನ್ನನ್ನು ಮುಗಿಸುವುದಾಗಿ ಜೀವ ಬೆದರಿಕೆಯನ್ನು ಸಹ ಹಾಕಿರುತ್ತಾನೆ. ಸುಮಾರು ಇಪ್ಪತ್ತು ನಿಮಿಷಕ್ಕೂ ಹೆಚ್ಚು ಸಮಯ ಕರೆಯಲ್ಲಿ ಮಾತನಾಡಿದ ಪಳನಿವೇಲು ನನ್ನ ಕುಟುಂಬದ ಬಗ್ಗೆ ಮತ್ತು ನನ್ನ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡಿರುತ್ತಾನೆ. ರಾಜ್ಯದ ಹಲವು ನಾಯಕರ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಹೆಸರನ್ನು ತೆಗೆದು ಅವಾಚ್ಯವಾಗಿ ಬೈಯ್ದಿರುತ್ತಾನೆ. ಬೆಳ್ತಂಗಡಿ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ನಮ್ಮ ಎದುರುದಾರರಾದ ಗೋಪಕುಮಾರ್ ಇವರ ಪರವಾಗಿ ಮಾತನಾಡಿರುವುದು ಪಳನಿವೇಲು ಅವರ ದುರುದ್ದೇಶವನ್ನು ತೋರಿಸುತ್ತದೆ.

ನಾನು ಈ ಬಗೆಗಿನ ಮಾಹಿತಿಯನ್ನು ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ಇವರಿಗೆ ತಿಳಿಸಿರುತ್ತೇನೆ. ನನ್ನ ಮನೆಯಲ್ಲಿ ಮುರೂವರೆ ತಿಂಗಳ ಹಸುಗೂಸು ಇದ್ದು ನನ್ನ ಅತ್ತೆ ಮಾವನವರು ಸಹ ಅಪರೂಪದಲ್ಲಿ ಬಂದವರು ಇದ್ದರು. ಆ ದಿನ ತಡ ರಾತ್ರಿಯ ತನಕ ನಿರಂತರ ಫೋನ್ ಮಾಡಿ ನನಗೆ ಮತ್ತು ನನ್ನ ಮನೆಯವರಿಗೆ ಮಾನಸಿಕ ಕಿರುಕುಳ ಕೊಟ್ಟಿರುತ್ತಾರೆ. ಮತ್ತು ನನ್ನ ಮಡದಿ ನನ್ನ ಮಗನ ಘಟನೆ ನಡೆದ ನಂತರ ಇನ್ನು ಆ ಘಟನೆಯ ಕರಿ ಛಾಯೆಯಿಂದ ಹೊರಬಾರದಿದ್ದು, ಈ ವ್ಯಕ್ತಿಯ ಕಿರುಕುಳದಿಂದ ಸಂಪೂರ್ಣ ನೊಂದುಕೊಂಡು ಮಡದಿಯ ಮಾನಸಿಕ ಸ್ಥಿತಿ ಅಸಮತೋಲನಗೊಂಡಿರುತ್ತದೆ.
ಈ ಘಟನೆಯ ನಂತರ ಅವಳನ್ನು ಮನೆಯಲ್ಲಿ ಒಬ್ಬಳನ್ನೇ ಬಿಟ್ಟು ಹೊರಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ನನಗೆ ಕಳುಹಿಸಿದ ಮೆಸೇಜ್ ಮತ್ತು ಮಾಡಿದ ಕರೆಗಳ ವಿವರಕ್ಕೆ ಸಂಬಂಧಿಸಿದಂತೆ ಸ್ಕ್ರೀನ್ ಶಾಟ್‌ಗಳನ್ನೂ ಮತ್ತು ಕರೆಗಳ ರೆಕಾಡಿಂಗ್‌ಗಳನ್ನೂ ತಮ್ಮ ಅವಗಾಹನೆಗಾಗಿ ಸಲ್ಲಿಸುತ್ತಿದ್ದೇನೆ. ನನ್ನ ವಿರುದ್ಧ ಯಾವುದೇ ಪ್ರಕರಣ ಬೆಳ್ತಂಗಡಿ ಠಾಣೆಯಲ್ಲಿ ಇಲ್ಲದಿದ್ದಾಗಲೂ ವಿಚಾರಣೆ ಹೆಸರಿನಲ್ಲಿ ನನ್ನನ್ನು ಸುಲಿಗೆ ಮಾಡಿದ ಮತ್ತು ಈಗ ಪ್ರತಿ ನಿತ್ಯ ಅಪರಾತ್ರಿ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಪಳನಿವೇಲು ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ಪ್ರಾರ್ಥಿಸುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದರು.
ಈ ಬಗ್ಗೆ ತಕ್ಷಣ ಸ್ಪಂದಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಡಿವೈಎಸ್‌ಪಿ ವಿಜಯ ಪ್ರಸಾದ್ ಮತ್ತು ಇನ್ಸ್‌ಪೆಕ್ಟರ್ ಸುಬ್ಬಾಪುರಮಠ್ ಅವರಿಂದ ಮಾಹಿತಿ ಪಡೆದುಕೊಂಡ ಬಳಿಕ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಡ್‌ಕಾನ್ಸ್‌ಟೇಬಲ್ ಪಳನಿವೇಲು ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here