ಉಜಿರೆ: ಅತಿಯಾದ ವೇಗ, ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ, ಹೆಲ್ಮೆಟ್ ಧರಿಸದಿರುವುದು, ಸಂಚಾರಿ ನಿಯಮಗಳ ನಿರ್ಲಕ್ಷ್ಯ, ಕುಡಿದು ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಕಾರಣ ವಿಶೇಷವಾಗಿ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಲು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆ ಪ್ರಯುಕ್ತ ಎಸ್. ಡಿ. ಎಂ. ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಜ. 29 ರಂದು ರಸ್ತೆ ಸುರಕ್ಷತಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ರತ್ನಾವತಿ ಕೆ. ನೇತೃತ್ವದಲ್ಲಿ ಸಂಯೋಜಕ ಭಾನುಪ್ರಕಾಶ್ ಬಿ. ಇ., ಸುಮನ್ ಜೈನ್ ಮತ್ತು ದೀಕ್ಷಿತಾ ಕುಮಾರಿ ಉಸ್ತುವಾರಿಯಲ್ಲಿ ವಿಭಾಗದ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿದ್ದವನದಿಂದ ಮುಖ್ಯ ರಸ್ತೆಯಲ್ಲಿ ಘೋಷಣೆಯ ನಾಮಫಲಕದೊಂದಿಗೆ ರಸ್ತೆ ಸುರಕ್ಷತೆಯ ಜಾಥಾ ನಡೆಸಿ ಉಜಿರೆ ಬಸ್ ನಿಲ್ದಾಣ ಬಳಿ ಯಶವಂತ್ ನಿರ್ದೇಶನದಲ್ಲಿ ರಸ್ತೆ ಸುರಕ್ಷತೆಯ ಕುರಿತು ಬೀದಿ ನಾಟಕ ಪ್ರದರ್ಶಿಸಿದರು. ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ಅರ್ಜುನ್ ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.