ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗರ್ಭಗೃಹದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಜ. 20 ರಿಂದ 23 ರವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಇಂದು ಬೆಳಗ್ಗೆಯಿಂದ ವಿವಿಧ ಪೂಜಾ ವಿಧಾನಗಳು ನಡೆದು ಮದ್ಯಾಹ್ನ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್ ಭೇಟಿ ನೀಡಿ 35 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಶಾಸ್ತಾರ ದೇವರ ಗಜ ವೃಷ್ಟಾಕಾರದ ಗರ್ಭಗುಡಿಯ ಕೆಲಸ ಮಾಡಿದ ಪ್ರತಿಯೊಬ್ಬರ ಕೆಲಸ ಉತ್ತಮವಾಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತ ಪಡಿಸಿದರು. ದೇವಸ್ಥಾನದ ದೇವರ ಉತ್ಸವಕ್ಕೆ ದಾನಿಗಳಾದ ಸುಮಾ ಪ್ರಕಾಶ್ ಶೆಟ್ಟಿ ಬೈಂದೂರು ನೀಡಿದ ಪಲ್ಲಕ್ಕಿಯನ್ನು ನೋಡಿ ಕೊಂಡಾಡಿದರು. ಹಾಗೆಯೇ ದೇವಳಕ್ಕೆ ಅಗತ್ಯವಿರುವ ಫ್ಯಾನ್, ಬ್ರಹ್ಮಕಲಶೋತ್ಸವ ಸಂಧರ್ಭದಲ್ಲಿ ಅನ್ನಸಂತರ್ಪಣೆಗೆ ಬೇಕಾಗುವ ಯಾವುದೇ ವಸ್ತುವನ್ನು ನೀಡುವುದಾಗಿ ಮತ್ತು ದೇವಳಕ್ಕೆ ಶಾಶ್ವತ ಊಟದ ತಟ್ಟೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಭಕ್ತಾದಿಗಳನ್ನು ಉದ್ದೇಶಿಸಿ, ಮನೆಯಿಂದ ವಾರಕ್ಕೆ ಒಮ್ಮೆಯಾದರು ದೇವಸ್ಥಾನಕ್ಕೆ ಬಂದು ಸೇರಿ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅಗ ನಮ್ಮ ಸಮಾಜ ಮತ್ತು ಮುಂದಿನ ಪೀಳಿಗೆಗೆ ಉತ್ತಮ ರೀತಿಯಲ್ಲಿ ಸಂಘಟಿತವಾಗುತ್ತದೆ ಎಂದರು.
ಆಡಳಿತ ಸಮಿತಿ ಅಧ್ಯಕ್ಷ ಶ್ರೀಧರ್ ರಾವ್, ಕಳೆಂಜ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಅಶೋಕ್ ಭಟ್ ಕಾಯಡ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕೇಶವ ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಚಂದ್ರಶೇಖರ ಕೆ., ಆಡಳಿತ ಸಮಿತಿ ಕಾರ್ಯದರ್ಶಿ ಕುಸುಮಾಕರ ಕೊತ್ತೋಡಿ, ಬ್ರಹ್ಮಕಲಶೋತ್ಸವ ಸಮಿತಿ ಖಜಾಂಜಿ ವೆಂಕಪ್ಪ ಗೌಡ, ಬ್ರಹ್ಮಕಲಶೋತ್ಸವ ಸಮಿತಿ, ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಊರವರು ಉಪಸ್ಥಿತರಿದ್ದರು.