ಬೆಳ್ತಂಗಡಿ: ಶೇರು ಮಾರ್ಕೆಟ್ ಮೂಲಕ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ವಂಚಿಸಿದ ಆರೋಪದಡಿ ಬೆಳ್ತಂಗಡಿ ತಾಲೂಕಿನ ನಾಲ್ವರ ಸಹಿತ ಒಟ್ಟು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಓರ್ವನನ್ನು ಬಂಧಿಸಿರುವ ಹುಬ್ಬಳ್ಳಿ-ಧಾರವಾಡ ಸಿಟಿ ಸೆನ್ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಶೇರ್ ಮಾರ್ಕೆಟ್ ವ್ಯವಹಾರಕ್ಕೆ ಹಣ ಹೂಡಿಕೆ ಮಾಡಿದರೆ ಜಮಾ ಮಾಡಿದ ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆ ಮಾಡಿಸಿ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸಹಿತ ವಿವಿಧೆಡೆಯ ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಸಹಿತ ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಬೆಳ್ತಂಗಡಿ ತಾಲೂಕಿನ ನಾಲ್ವರು ಸಹಿತ ಒಟ್ಟು ಆರು ಮಂದಿ ಇದೇ ಮಾದರಿಯಲ್ಲಿ ಹುಬ್ಬಳ್ಳಿಯ ವೈದ್ಯರೋರ್ವರಿಗೆ ಲಕ್ಷಾಂತರ ರೂ ವಂಚಿಸಿದ್ದಾರೆ ಎಂದು ಹೇಳಲಾಗಿದೆ. ವಂಚನೆಗೊಳಗಾದ ಹುಬ್ಬಳ್ಳಿಯ ವೈದ್ಯ ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಹುಬ್ಬಳ್ಳಿ-ಧಾರವಾಡ ಸಿಟಿ ಸೆನ್ ಠಾಣಾ ಪೊಲೀಸರು ಬೆಳ್ತಂಗಡಿಯ ಸಂತೆಕಟ್ಟೆ ಬಳಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ಬ್ಯಾಂಕೊಂದರಲ್ಲಿ ಸಿಬ್ಬಂದಿಯಾಗಿರುವ ಕುವೆಟ್ಟು ವರ್ಕಬೆಯ ಜನೀಶ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ಬೆಳ್ತಂಗಡಿ ತಾಲೂಕಿನ ಅರುಣ್, ಬೆಳ್ತಂಗಡಿಯ ನವೀನ್, ಯೋಗೀಶ್ ಹಾಗೂ ಮಂಗಳೂರಿನ ಈರ್ವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಳ್ತಂಗಡಿಯ ಯುವಕರಿಂದ ಶೇರ್ ಮಾರ್ಕೆಟ್ ಹೆಸರಲ್ಲಿ ಕೋಟ್ಯಂತರ ರೂ ವಂಚನೆ ಪ್ರಕರಣ: ಹುಬ್ಬಳ್ಳಿ-ಧಾರವಾಡ- ಸಿಟಿ ಸೆನ್ ಪೊಲೀಸರಿಂದ ಮುಂದುವರಿದ ತನಿಖೆ
p>