ನ್ಯೂ ವೈಬ್ರೆಂಟ್ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ: ಮುನಿರಾಜ ರೆಂಜಾಳ ಇವರಿಗೆ ವೈಬ್ರೆಂಟ್ ಶಿಕ್ಷಣ ಚೇತನ ಪ್ರಶಸ್ತಿ ಪುರಸ್ಕಾರ

0

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಗುರುವಂದನಾ ಹಾಗೂ ವೈಬ್ರೆಂಟ್ ಶಿಕ್ಷಣ ಚೇತನ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂಡುಬಿದಿರೆಯ ಹಿರಿಯ ಉದ್ಯಮಿ ಕೆ.ಶ್ರೀಪತಿ ಭಟ್ ಇವರು ದೀಪ ಪ್ರಜ್ವಲನೆಯನ್ನು ನೆರವೇರಿಸಿ ಮಾತನಾಡುತ್ತಾ ವಿದ್ಯಾರ್ಥಿಯು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೆ ಕೊಡುಗೆ ನೀಡುವಂತೆ ರೂಪುಗೊಳ್ಳಬೇಕು ಇದಕ್ಕೆ ಶಿಕ್ಷಕರ ಕೊಡುಗೆ, ಪರಿಶ್ರಮದೊಂದಿಗೆ ವಿದ್ಯಾರ್ಥಿಗಳ ಸ್ವಯಂ ಪ್ರಯತ್ನವೂ ಅತಿ ಅಗತ್ಯವಾಗಿರುತ್ತದೆ ಎಂದು ಹೇಳಿದರು.

ವೈಬ್ರೆಂಟ್ ಶಿಕ್ಷಣ ಚೇತನ ಪ್ರಶಸ್ತಿ ಪುರಸ್ಕಾರ: ಸಂಸ್ಥೆಯು ಇದೇ ಮೊದಲ ಬಾರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯವನ್ನು ಆಯೋಜಿಸಿದ್ದು ಈ ವರ್ಷ ಪ್ರಶಸ್ತಿಯನ್ನು ಕಾರ್ಕಳ ತಾಲೂಕಿನ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜು ರೆಂಜಾಳ ಇವರಿಗೆ “ವೈಬ್ರೆಂಟ್ ಶಿಕ್ಷಣ ಚೇತನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕಾರವನ್ನು ಪಡೆದ ನಂತರ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಒಂದು ವೃತ್ತಿಯನ್ನು ಮಾಡುವಾಗ ಅವರು ಬಯಸುವುದು ತಾನು ಎತ್ತರಕ್ಕೆ ಬೆಳಿಬೇಕು, ಸಾಧನೆ ಮಾಡಬೇಕು, ಕೈತುಂಬ ಸಂಪಾದನೆ ಮಾಡಬೇಕೆಂದುಕೊಳ್ಳುತ್ತಾರೆ. ಇಂದು ಪ್ರತಿಯೊಂದು ಕೆಲಸ ಮಾಡಲು ತೊಡಗಿದಾಗಲೂ ನನಗೆ ಏನು ಲಾಭ ಈ ಕೆಲಸ ಮಾಡುವುದರಿಂದ ಎಂದು ಆಲೋಚಿಸುವ ಸ್ವಾರ್ಥ ಎಲ್ಲೆಡೆಯಲ್ಲೂ ಹಬ್ಬಿದಿದೆ. ಇಂತಹ ಕಾಲಘಟ್ಟದಲ್ಲಿ ಒಂದು ವೃತ್ತಿ ಮಾತ್ರ ತನ್ನ ಎದುರಿರುವ ಮಗು ಸಾಧನೆ ಮಾಡಿದರೆ ತಾನು ಗೆದ್ದ ಹಾಗೆ, ಸಾಧನೆ ಮಾಡಿದ ಹಾಗೆಂದು ಬಯಸುವ ವೃತ್ತಿಯೇ ಶಿಕ್ಷಕ ವೃತ್ತಿ ಎಂದು ಹೇಳಿದರು. ಬಹುಶಃ ಜಗತ್ತಿನಾದ್ಯಂತ ಆಸ್ತಿ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಬೇರೆಯಾರಿಂದಲೂ ಸಾಧ್ಯವಿಲ್ಲ. ತನ್ನ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಓದಿ ಬೇರೆ ಬೇರೆ ದೇಶಗಳಲ್ಲಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡಾಗೆಲ್ಲ ತಾನು ಕೂಡ ಆ ದೇಶದಲ್ಲಿ ಆಸ್ತಿ ಮಾಡಿಕೊಂಡಷ್ಟು ಹೆಮ್ಮೆ ಪಡುತ್ತಾರೆ. ಶಿಕ್ಷಕರಿಗೆ ತನ್ನ ಮಕ್ಕಳೇ ಆಸ್ತಿಯಾಗಿರುತ್ತದೆ. ತಾನು ಕೆಳಗಿದ್ದರೂ ಪರವಾಗಿಲ್ಲ ತನ್ನ ವಿದ್ಯಾರ್ಥಿಗಳು ಮಾಡಿದ ಸಾಧನೆಯನ್ನು ತನ್ನ ಸಾಧನೆ ಎಂದು ಸಂಭ್ರಮಿಸುವ ಶಿಕ್ಷಕರನ್ನು ಸದಾ ಕಾಲ ಸ್ಮರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಇವತ್ತಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಐಟಿಬಿಟಿ ಕಂಪನಿಗಳಲ್ಲಿ ಬೇರೆ ದೇಶದ ವಿದ್ಯಾರ್ಥಿಗಳಿಗಿಂತಲೂ ಹೆಚ್ಚು ಸಾಧನೆ ಮಾಡುತ್ತಿದ್ದಾರೆ ಈ ಒಂದು ಅಪೂರ್ವ ಸಾಧನೆಯ ಹಿಂದೆ ಶಿಕ್ಷಕರ ಪಾತ್ರವಿದೆ ಎಂಬುದನ್ನು ನೆನಪು ಮಾಡಿಕೊಂಡಾಗ ನಮ್ಮ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯವನ್ನು ಅಂಕದ ಜೊತೆಗೆ ವಿವೇಕವನ್ನು ಕಲಿಯಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈಬ್ರೆಂಟ್ ಎಜುಕೇಷನ್ ಮತ್ತು ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿಗಳಲ್ಲಿ ಒಬ್ಬರಾದ ಶರತ್ ಗೋರೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರು ಹಾಗೂ ಟ್ರಸ್ಟಿಗಳಾಗಿರುವ ಡಾ. ಎಸ್.ಎನ್.ವೆಂಕಟೇಶ್ ನಾಯಕ್‌ರವರು ಕಾರ್ಯಕ್ರಮದ ಕುರಿತು ಪ್ರಸ್ತಾವಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ನಿತಿನ್ ಪಿ.ಎಸ್ ಅಭಿನಂದನಾ ಮಾತುಗಳನ್ನಾಡಿ, ಪ್ರಶಸ್ತಿ ಪತ್ರವನ್ನು ವಾಚಿಸಿದರು. ವೇದಿಕೆಯಲ್ಲಿ ವೈಬ್ರೆಂಟ್ ಎಜುಕೇಷನ್ ಮತ್ತು ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಮೆಹಬೂಬ ಬಾಷಾ, ಸುಭಾಷ್ ಝಾ, ಚಂದ್ರಶೇಖರ ರಾಜೇ ಅರಸ್, ಯೋಗೇಶ್ ಬೆಡೆಕರ್ ಉಪಸ್ಥಿತರಿದ್ದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ರಾಗಿಣಿ ವಂದಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನನ್ಯ ಪ್ರಭು ವಂದಿಸಿದರು.

p>

LEAVE A REPLY

Please enter your comment!
Please enter your name here