ಬೆಳ್ತಂಗಡಿ: ತುಳುವ ಪಾಡ್ದನದ ‘ಡೆನ್ನಾನ ಡೆನ್ನಾನ’ ಎಂಬ ಪದದಲ್ಲಿ ಇಡೀ ತುಳುವ ಸಂಸ್ಕೃತಿ ಇದೆ. ಅದೇ ಹೆಸರಿನಲ್ಲಿ ಯುವವಾಹಿನಿ ಕಾರ್ಯಕ್ರಮ ಸಂಯೋಜಿಸಿ ಬಿಲ್ಲವ ಸಮಾಜದ ಮತ್ತು ತುಳುನಾಡಿನ ಸಾಂಸ್ಕೃತಿಕ ಹಿನ್ನೆಲೆ ಪರಿಚಯ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ಹಾಗು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.
ಬೆಳ್ತಂಗಡಿಯ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಅಕ್ಟೋಬರ್ 27ರಂದು ಯುವವಾಹಿನಿ ಕೇಂದ್ರ ಸಮಿತಿ ನೇತೃತ್ವದಲ್ಲಿ ಹಾಗು ಬೆಳ್ತಂಗಡಿ ಘಟಕದ ಅತಿಥ್ಯದಲ್ಲಿ ‘ಡೆನ್ನಾನ ಡೆನ್ನಾನ-2024’ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಸೆ.15ರಂದು ನಡೆದಿದ್ದು, ಈ ಸಂದರ್ಭದಲ್ಲಿ ರಕ್ಷಿತ್ ಶಿವರಾಂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.
ಬೆಳ್ತಂಗಡಿಯಲ್ಲಿ ಬಲಿಷ್ಠವಾದ ಯುವ ಘಟಕ ಇದೆ. ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುತ್ತಾ ಬಂದಿದ್ದಾರೆ. ಬನ್ನಂಜೆ ಸಂಜೀವ ಸುವರ್ಣ ಅವರು ಯಕ್ಷಗಾನ ಕಲಾ ಕೇಂದ್ರ ಸ್ಥಾಪಿಸಿ ಯಕ್ಷಗಾನದ ಅಭಿರುಚಿ ಬೆಳೆಸುತ್ತಿರುವಂತೆ ಮುಂದಿನ ದಿನಗಳಲ್ಲಿ ಬೆಳ್ತಂಗಡಿಯಲ್ಲೂ ಅಂತಹ ಒಂದು ಯಕ್ಷಗಾನ ಕಲಾ ಕೇಂದ್ರ ಸ್ಥಾಪನೆಯಾಗಲಿ’ ಎಂದು ಶುಭ ಹಾರೈಸಿದರು.
ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ್ ಕಲ್ಲಾಪು ಮಾತನಾಡಿ, ‘ಯುವವಾಹಿನಿ ಸಮಾಜ ಮುಖಿಯಾದ ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.ಯುವವಾಹಿನಿಯ ಕಾರ್ಯಕ್ರಮಗಳಿಗೆ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದು, ಎಲ್ಲರೂ ಒಟ್ಟು ಸೇರಿ ಕಾರ್ಯಕ್ರಮ ಯಶಸ್ವಿ ಮಾಡಬೇಕು’ ಎಂದರು.
ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾಶಿವ ಊರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷರುಗಳಾದ ಹರೀಶ್ ಸುವರ್ಣ ಕನ್ಯಾಡಿ, ಅಶ್ವಥ್ ಕುಮಾರ್, ಪ್ರಶಾಂತ್ ಮಚ್ಚಿನ, ಎಂ.ಕೆ.ಪ್ರಸಾದ್ ., ಸುಜಾತ ಅಣ್ಣಿ ಪೂಜಾರಿ, ಸಲಹೆಗಾರ ರಮಾನಂದ ಸಾಲಿಯಾನ್, ಮಹಿಳಾ ಸಂಚಲನ ಸಮಿತಿ ಅಧ್ಯಕ್ಷೆ ವನಿತಾ ಜನಾರ್ದನ, ವೇಣೂರು ಘಟಕದ ಅಧ್ಯಕ್ಷ ಶುಭಕರ ಪೂಜಾರಿ, ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಕಾರ್ಯದರ್ಶಿ ಶಾಂಭವಿ ಉಪಸ್ಥಿತರಿದ್ದರು.
ಯುವವಾಹಿನಿ ಘಟಕದ ನಿರ್ದೇಶಕಿ ಬೇಬಿಂದ್ರ ಪ್ರಾರ್ಥನೆ ನೆರವೇರಿಸಿದರು. ಘಟಕದ ಸ್ಥಾಪಕಾಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.