ಬೆಳ್ತಂಗಡಿ: ವಿಶ್ವದಲ್ಲಿಯೇ ಜನಪ್ರಿಯತೆಯನ್ನು ಪಡೆದ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ತುಳುವರ ಕರ್ತವ್ಯವಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರನಾಥ ಗಟ್ಟಿ ಹೇಳಿದರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ವಾಣಿ ಪದವಿ ಪೂರ್ವ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ಜರಗಿದ ತಾಲೂಕು ಮಟ್ಟದ ಎರಡು ದಿನದ ತುಳು ಸಾಹಿತ್ಯ ರಚನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಾ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮೂಲಕ ಬೇರೆ ಬೇರೆ ಯೋಜನೆಗಳನ್ನು ಹಮ್ಮಿಕೊಂಡು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ಕೆಲಸಗಳಾಗುತ್ತಿವೆ. ಶಿಕ್ಷಣದಲ್ಲಿ ತುಳು ಭಾಷೆಯನ್ನು ಅಳವಡಿಸಲಾಗಿದೆ. ಇದರಿಂದ ಭಾಷೆಯ ಉಳಿವಿನೊಂದಿಗೆ ವಿಸ್ತರಣೆ ಹಾಗೂ ಅಧ್ಯಯನ ಸಾಧ್ಯವಾಗುತ್ತದೆ. ಸಾಹಿತ್ಯವನ್ನು ಓದುವ ಅಭಿರುಚಿಯನ್ನು ವಿದ್ಯಾರ್ಥಿಗಳು ಹೊಂದಿದಾಗ ಹೆಚ್ಚಿನ ಜ್ಞಾನಗಳಿಸಿಕೊಳ್ಳಲು ಸಾಧ್ಯವಿದೆ ಎಂದರು.
ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಶೈಲೇಶ್ ಕುಮಾರ್, ಸಂಪನ್ಮೂಲ ವ್ಯಕ್ತಿ ಉಜಿರೆ ಎಸ್ ಡಿ ಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ದಿವಾ ಕೊಕ್ಕಡ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಯದುಪತಿ ಗೌಡ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಉಪನ್ಯಾಸಕಿ ಮೀನಾಕ್ಷಿ ಧನ್ಯವಾದವಿತ್ತರು. ಕಾಲೇಜಿನ ತುಳು ಸಂಘದ ಸಂಯೋಜಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ದಿವಾ ಕೊಕ್ಕಡ ತುಳುನಾಡಿನ ಆಚರಣೆಗಳು ಮತ್ತು ಕವಿತೆ ರಚನೆಯ ಬಗ್ಗೆ ಹಾಗೂ ಸದಾನಂದ ಮುಂಡಾಚೆ ಕಥಾ ರಚನೆಯ ಕುರಿತು ಕಮ್ಮಟವನ್ನು ನಡೆಸಿಕೊಟ್ಟರು.