ಬೆಳ್ತಂಗಡಿ: ಕೇಂದ್ರ ಸರಕಾರವು ಲೋಕಸಭೆಯಲ್ಲಿ ಮಂಡಿಸಿರುವ ನೂತನ ವಕ್ಫ್ (ತಿದ್ದುಪಡಿ) ಮಸೂದೆಯ ಬಗ್ಗೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ವಿಶೇಷ ಚಿಂತನ ಮಂಥನ ಸಭೆಯಲ್ಲಿ ತಾಲೂಕಿನ ಸಮುದಾಯ ಪ್ರಮುಖರು ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಹಿರಿಯ ನ್ಯಾಯವಾದಿ, ನೋಟರಿ ಬಿ.ಎ.ಮುಹಮ್ಮದ್ ಹನೀಫ್ ಅವರು ನೂತನ ವಕ್ಫ್ ತಿದ್ದುಪಡಿ ಮಸೂದೆ ಜಾರಿಯಾದರೆ ಆಗುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ರಾಜ್ಯ ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ. ಜಿಲ್ಲಾ ವಕ್ಸ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಕೇಂದ್ರ ಸರಕಾರವು ತರಾತುರಿಯಲ್ಲಿ ಜಾರಿಗೊಳಿಸಲು ಮುಂದಾಗಿರುವ ನೂತನ ವಕ್ಫ್ ತಿದ್ದುಪಡಿ ಮಸೂದೆಯಿಂದ ಸಾಕಷ್ಟು ಸಮಸ್ಯೆಯಾಗಲಿದೆ. ವಿಪಕ್ಷದ ಪ್ರಬಲ ವಿರೋಧದ ಮಧ್ಯೆಯೂ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದ ಬಳಿಕ ಜಂಟಿ ಪಾರ್ಲಿಮೆಂಟ್ ಸಮಿತಿಯನ್ನು ಸರಕಾರ ರಚಿಸಿದೆ. ಅದರಲ್ಲಿ ರಾಜ್ಯದ ಮೂವರು ಸಂಸದರ ಸಹಿತ ದೇಶದ ಒಟ್ಟು 52 ಸಂಸದರಿದ್ದಾರೆ. ಇದೀಗ ವಿವಿಧ ಕ್ಷೇತ್ರಗಳ ಪ್ರಮುಖರ ಅಭಿಪ್ರಾಯಗಳನ್ನು ಪಡೆದು ಸೆ.13ರೊಳಗೆ ತಿಳಿಸಲು ಸೂಚಿಸಲಾಗಿದೆ. ಅದರಂತೆ ರಾಜ್ಯ ವಕ್ಫ್ ಬೋರ್ಡ್ ಜಿಲ್ಲಾ ವಕ್ಫ್ ಸಲಹಾ ಸಮಿತಿಗಳ ಮೂಲಕ ಅಭಿಪ್ರಾಯ ಸಂಗ್ರಹಿಸಿದೆ. ಅದಲ್ಲದೆ ರಾಜ್ಯ ವಕ್ಫ್ ಬೋರ್ಡ್ ಇದರ ವಿರುದ್ದ ಮುಖ್ಯಮಂತ್ರಿಯ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಡ ಹೇರಲು ಪ್ರಯತ್ನ ಸಾಗಿದೆ. ಮುಖ್ಯಮಂತ್ರಿಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಕ್ಯೂಆರ್ ಕೋಡ್ ಬಳಸಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ಇದನ್ನು ಸದುಪಯೋಗ ಪಡಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.
ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನಿಂದ ಕಾಜೂರು ದರ್ಗಾ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಹಾಗೂ ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯ ಜೆ. ಹೆಚ್ ಅಬೂಬಕ್ಕರ್ ಸಿದ್ದೀಕ್, ಸಾದಿಕ್ ಮಲೆಬೆಟ್ಟು, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ, ಅಬ್ಬೋನು ಮದ್ದಡ್ಕ, ಅಬ್ದುಲ್ ಕರೀಂ ಗೇರುಕಟ್ಟೆ, ಯು.ಕೆ ಮುಹಮ್ಮದ್ ಹನೀಫ್ ಉಜಿರೆ ರವರು ಭಾಗಿಯಾಗಿದ್ದರು.