ಇಂಡೋ-ನೇಪಾಳ ತ್ರೋಬಾಲ್ ಚಾಂಪಿಯನ್‌ಶಿಪ್- ಕಣಿಯೂರಿನ ಯೂನಿತ್ ನಾಯಕತ್ವದ ತಂಡ ಪ್ರಥಮ- ಮಿಂಚಿದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾರ್ಥಿಗಳು

0

ಬೆಳ್ತಂಗಡಿ: ಇಂಡೋ – ನೇಪಾಳ ಅಂತಾರಾಷ್ಟ್ರೀಯ ತ್ರೋಬಾಲ್ ಆಹ್ವಾನಿತ ಪುರುಷ ಮತ್ತು ಮಹಿಳಾ ಕ್ರೀಡಾ ಚಾಂಪಿಯನ್‌ಶಿಪ್-2024ರಲ್ಲಿ ಖೇಲೋ ಭಾರತ್ ಯೂತ್ ಗೇಮ್ಸ್ ಫೆಡರೇಶನ್ ಇಂಡಿಯಾ ತಂಡವನ್ನು ಪ್ರತಿನಿಧಿಸಿದ ಕಣಿಯೂರಿನ ಯೂನಿತ್ ಕೆ. ನಾಯಕತ್ವದ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.ನೇಪಾಳದ ಪೋಖ್ರಾ ರಂಗಶಾಲಾದಲ್ಲಿ ಆ.31ರಿಂದ ಸೆ.2ರವರೆಗೆ ನಡೆದ ಪಂದ್ಯಾಟದಲ್ಲಿ ಭಾಗವಹಿಸಿದ ಪುರುಷ ಮತ್ತು ಮಹಿಳೆಯರ ತಂಡ ಪ್ರಥಮ ಸ್ಥಾನ ಗಳಿಸಿದೆ. ಎರಡೂ ತಂಡಗಳಿಗೆ ಕೊಡಗಿನ ವಿರಾಜಪೇಟೆಯ ರೈಶಿಂಗ್ ಸ್ಟಾರ್ ಕೋಚಿಂಗ್ ಸೆಂಟರ್‌ನ ಶಿಬಿರದಲ್ಲಿ ತರಬೇತಿ ನೀಡಲಾಗಿತ್ತು.

ಮಿಂಚಿದ ತಾಲೂಕಿನ ಕ್ರೀಡಾಪಟುಗಳು: ಪುರುಷರ ತಂಡದಲ್ಲಿ ವೈಯಕ್ತಿಕ ನೆಲೆಯಲ್ಲಿ ತಂಡ ನಾಯಕ ಕಣಿಯೂರು ಗ್ರಾಮದ ಕದ್ರಿ ನಿವಾಸಿ ಮಂಜುನಾಥ್ ಗೌಡ – ರತ್ನಾ ಕೆ. ದಂಪತಿಯ ಪುತ್ರ ಯೂನಿತ್ ಕೆ. ಉತ್ತಮ ಆಲ್‌ರೌಂಡರ್ ಪ್ರಶಸ್ತಿ ಪಡೆದರು. ಇವರು ಸೇರ್ಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ, ಪ್ರಸ್ತುತ ನಿಟ್ಟೆ ಕಾಲೇಜಿನ ವಿದ್ಯಾರ್ಥಿ. ಇಳಂತಿಲ ಗ್ರಾಮದ ನೆಲ್ಲಿಪಲ್ಲಿಕೆ ನಿವಾಸಿ ಧನಂಜಯ ಗೌಡ – ಭಾರತಿ ದಂಪತಿಯ ಪುತ್ರ ರೋಹಿತ್ ಉತ್ತಮ ಎಸೆತಗಾರ ಪ್ರಶಸ್ತಿ ಗೆದ್ದರು. ಮಡಂತ್ಯಾರಿನ ಸೆಬಾಸ್ಟಿನ್ ವೇಗಸ್ – ಲೀನಾ ವೇಗಸ್ ದಂಪತಿಯ ಪುತ್ರ ಶಾನ್ ವೇಗಸ್ ಹಾಗೂ ಅಚ್ಚುತ – ಗಿರಿಜಾ ದಂಪತಿ ಪುತ್ರ ಅವಿನಾಶ್ ಉತ್ತಮ ಪ್ರದರ್ಶನ ನೀಡಿದರು. ಪ್ರಜ್ವಲ್, ಕರಿಯಪ್ಪ, ದೀಕ್ಷಿತ್, ರವಿವರ್ಧನ್, ರಕ್ಷಿತ್, ಪೆಮ್ಮೆಯ್ಯ ಹಾಗೂ ದರ್ಶನ್ ತಂಡದಲ್ಲಿದ್ದರು.

ಮಡಂತ್ಯಾರಿನ ವೆರೋನಿಕಾಗೆ ಪ್ರಶಸ್ತಿ: ಮಹಿಳೆಯರ ತಂಡವನ್ನು ಪ್ರತಿನಿಧಿಸಿದ ಮಡಂತ್ಯಾರಿನ ಕ್ಲೋಡ್ ಫ್ರಾನ್ಸಿಸ್ ಮಿಸ್ಕ್ಯುತ್ – ಡಯಾನಾ ಮಿಸ್ಕಿತ್ ದಂಪತಿ ಪುತ್ರಿ ಡಾಫ್ನಿ ವೆರೋನಿಕಾ ಉತ್ತಮ ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು. ತಂಡದ ನಾಯಕಿ ಸುಪ್ರಿಯಾ ಎಸ್.ಪಿ. ಉತ್ತಮ ಎಸೆತಗಾರ ಪ್ರಶಸ್ತಿ ಪಡೆದರು. ಇವರು ಬಂಟ್ವಾಳ ತಾಲೂಕಿನ ಕಸಬಾ ಕೆತ್ತಿಮಾರಿನ ನಿವಾಸಿ ಶ್ರೀನಾಥ್ ಸಿ. – ಪೂರ್ಣಿಮಾ ದಂಪತಿ ಪುತ್ರಿ. ಸಿಂಚನಾ, ಭೂಮಿಕಾ, ಉಷಾ, ಭವನಾ ಹಾಗೂ ಗಾನಾವಿ ಉತ್ತಮ ಪ್ರದರ್ಶನ ನೀಡಿದರು.

ಮಿಂಚಿದ ಸೇಕ್ರೆಡ್ ಹಾರ್ಟ್ ವಿದ್ಯಾರ್ಥಿಗಳು: ನೇಪಾಳದಲ್ಲಿ ನಡೆದ ಪಂದ್ಯಾಟದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಆರು ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿದ್ಯಾಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಪುರುಷರ ತಂಡದ ನಾಯಕ ಯೂನಿತ್ ಕೆ., ಸದಸ್ಯರಾದ ಅವಿನಾಶ್, ಶಾನ್ ಲಿಂಟನ್ ವೇಗಸ್ ಹಾಗೂ ಮಹಿಳಾ ತಂಡದ ಕ್ಯಾಪ್ಟನ್ ಸುಪ್ರಿಯಾ ಎಸ್. ಪಿ., ಸದಸ್ಯರಾದ ಡಾಫ್ನಿ ವೆರೋನಿಕಾ ಮಿಸ್ಕ್ವಿತ್, ಭೂಮಿಕಾ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಪ್ರಾಂಶುಪಾಲ ಪ್ರೊ.ಅಲೆಕ್ಸ್ ಐವನ್ ಸಿಕ್ವೇರಾ ಅಭಿನಂದನೆ ಸಲ್ಲಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಪ್ರಕಾಶ್ ಡಿಸೋಜ ತರಬೇತಿ ನೀಡುವಲ್ಲಿ ಶ್ರಮಿಸಿದ್ದರು.

p>

LEAVE A REPLY

Please enter your comment!
Please enter your name here