ಉಜಿರೆ: ಎಸ್.ಡಿ.ಎಂ. ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ- ಯುವಜನತೆ ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳಬೇಕು: ರಮೇಶ್ ಹೆಚ್

0

ಉಜಿರೆ: ವ್ಯಾಯಾಮದ ಕೊರತೆಯಿಂದ ಹೃದಯಾಘಾತದ ಸಾಧ್ಯತೆ ಹೆಚ್ಚಿದ್ದು, ಯುವಜನತೆ ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುವ ಅಗತ್ಯವಿದೆ ಎಂದು ಉಜಿರೆ ಧ.ಮಂ. ಕಾಲೇಜಿನ ಎಸ್.ಡಿ.ಎಂ. ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಹೆಚ್. ಅಭಿಪ್ರಾಯಪಟ್ಟರು.

ಅವರು ಆ.29ರಂದು ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕಗಳು ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

“ಈಗಿನ ಆಹಾರ ಪದ್ಧತಿ ಮತ್ತು ಜೀವನ ಶೈಲಿಗೆ ವ್ಯಾಯಾಮ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ 18 ವರ್ಷದ ಯುವಜನತೆ ಕ್ರೀಡೆಯಲ್ಲಿ ತೊಡಗಿಕೊಳ್ಳುವ ಮೂಲಕ ದೇಹಕ್ಕೆ ಅಗತ್ಯ ವ್ಯಾಯಾಮ ದಕ್ಕಿಸಿಕೊಳ್ಳಬೇಕು. ಆ ಮೂಲಕ ಆರೋಗ್ಯ ಕಾಯ್ದುಕೊಳ್ಳಬೇಕು” ಎಂದು ಅವರು ಕರೆಕೊಟ್ಟರು.

ಕ್ರೀಡಾ ದಿನದ ಕುರಿತು ಮಾತನಾಡಿದ ಅವರು, 2012ರ ನಂತರ ಭಾರತ ಸರಕಾರವು ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಹುಟ್ಟುಹಬ್ಬದ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸುತ್ತಿದೆ ಎಂದು ತಿಳಿಸಿದರು.

“6 ಏಕಲವ್ಯ ಪ್ರಶಸ್ತಿ ಪಡೆದ ಒಂದೇ ಒಂದು ಸಂಸ್ಥೆ ಎಂದರೆ ಅದು ಎಸ್.ಡಿ.ಎಂ. ಕಾಲೇಜು 1984ರಲ್ಲಿ 10 ವಿದ್ಯಾರ್ಥಿಗಳಿಂದ ಆರಂಭಗೊಂಡ ಕಾಲೇಜಿನ ಕ್ರೀಡಾ ಸಂಘವು ಈಗ ಹಲವಾರು ಸೌಲಭ್ಯಗಳ ಜೊತೆಗೆ ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದೆ” ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, “ಜೀವನದ ಪ್ರತೀ ಹಂತದಲ್ಲೂ ಸ್ಪರ್ಧೆ ಇರುತ್ತದೆ. ಅದನ್ನು ಎದುರಿಸಲು ನಮಗೆ ಕ್ಷಮತೆ ಬೇಕಾಗುತ್ತದೆ. ಶರೀರ ಎಂಬ ರಥವನ್ನು ಮನಸ್ಸು ಎಂಬ ಸಾರಥಿ ಮುನ್ನಡೆಸುತ್ತಾನೆ. ಯುವಜನತೆಯಲ್ಲಿ ಅತಿಯಾದ ಮೊಬೈಲ್ ಬಳಕೆ ಅವರ ದೈಹಿಕ ಆರೋಗ್ಯ ಹಾಳು ಮಾಡುವಂತೆ ಮಾಡಿದೆ. ಮೊಬೈಲ್ ಬಳಕೆಯಿಂದ ವ್ಯಕ್ತಿಯ ಸೃಜನಶೀಲತೆ, ಮನುಷ್ಯರ ಜೊತೆ ಒಡನಾಟ ಎಲ್ಲವೂ ಕಡಿಮೆ ಆಗುತ್ತದೆ. ಹಾಗಾಗಿ ದೈಹಿಕವಾಗಿ ನಮ್ಮ ಆರೋಗ್ಯವನ್ನು ಸಮತೋಲನದಲ್ಲಿ ಇರಿಸಲು ಕ್ರೀಡೆ ಮತ್ತು ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದರು.

ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮಾತನಾಡಿ, “ಕ್ರೀಡೆ ನಮ್ಮ ಜೀವನವನ್ನು ಉತ್ಸಾಹದಲ್ಲಿ ಇರುವಂತೆ ಮಾಡುತ್ತದೆ. ಒಲಿಂಪಿಕ್ಸ್ ನಲ್ಲಿ ಭಾರತದ ಪ್ರದರ್ಶನವನ್ನು ಇತರ ದೇಶಗಳಿಗೆ ಹೋಲಿಸಿದಲ್ಲಿ, ಬೇರೆ ದೇಶಗಳು ಬಹಳ ಮುಂಚೂಣಿಯಲ್ಲಿವೆ. ಹಿಂದಿನ ದಿನಗಳಿಗೆ ಹೋಲಿಸಿದರೆ, ಕೇಂದ್ರ ಸರ್ಕಾರ ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಪ್ರಶಂಸನೀಯ” ಎಂದರು.

ಯೋಜನಾಧಿಕಾರಿ ಪ್ರೊ. ದೀಪಾ ಆರ್. ಪಿ. ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.

ಸ್ವಯಂಸೇವಕಿಯರಾದ ಪೂಜಶ್ರೀ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಕವಿತಾ ವಂದಿಸಿದರು.

p>

LEAVE A REPLY

Please enter your comment!
Please enter your name here