ಬೆಳ್ತಂಗಡಿ: ಬಂದಾರು ಗ್ರಾಮದ ಬೊಳ್ಜೆ ನಿವಾಸಿ ಚಿದಾನಂದ ಪೂಜಾರಿ ಮತ್ತು ಪಾರ್ವತಿ ದಂಪತಿಯ ಪುತ್ರಿ, ಉಜಿರೆ ಎಸ್.ಡಿ.ಎಂ.ಕಾಲೇಜಿನ ವಿದ್ಯಾರ್ಥಿನಿ ಕು.ತೇಜಸ್ವಿನಿ ಅವರು ಕರ್ನಾಟಕ ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್(2024/25)ನಲ್ಲಿ 80 ಕೆ.ಜಿ. ವಿಭಾಗದ ಸೀನಿಯರ್ ಮತ್ತು ಜೂನಿಯರ್ ಮಟ್ಟದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಈಕೆ 2021ರಲ್ಲಿ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 2022ರಲ್ಲಿ ಉಜಿರೆಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ, ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಮಹಿಳೆಯರ ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದಿದ್ದಾರೆ.ತಮಿಳುನಾಡಿನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
2023ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಮಹಿಳೆಯರ ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಆರನೇ ಸ್ಥಾನ ಹಾಗೂ ಮೈಸೂರಿನಲ್ಲಿ ನಡೆದ ದಸರಾ ಸಿಎಂ ಕಪ್ ನಲ್ಲಿ ದ್ವಿತೀಯ ಸ್ಥಾನ , ಅರುಣಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಜೂನಿಯರ್ ವಿಭಾಗದಲ್ಲಿ ಐದನೇ ಸ್ಥಾನ, ಚೆನ್ನೈನಲ್ಲಿ ನಡೆದ ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದಿದ್ದಾರೆ.
2024ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಮಹಿಳೆಯರ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.ಇದೀಗ ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ 80.ಕೆ.ಜಿ. ವಿಭಾಗದಲ್ಲಿ ಜೂನಿಯರ್/ಸೀನಿಯರ್ ಮಟ್ಟದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.