ಚಾರ್ಮಾಡಿ: “ಐದು ವರ್ಷಗಳ ಹಿಂದಿನ ಅನಿರೀಕ್ಷಿತ ಪ್ರವಾಹದಿಂದ ತತ್ತರಿಸಿದ್ದ ಕೊಳಂಬೆ ಪ್ರದೇಶದ ಜನರು ಇಂದು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ. ಇಂತಹ ಘಟನೆಗಳು ಇನ್ನು ಮರಕಳಿಸದಿರಲಿ. ಅಂದಿನ ಕಹಿ ಘಟನೆಗಳನ್ನು ಮರೆತು ಮುಂದುವರಿಯೋಣ” ಎಂದು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು. ಅವರು ಚಾರ್ಮಾಡಿ ಕೊಳಂಬೆಯಲ್ಲಿ 5 ವರ್ಷಗಳ ಹಿಂದೆ ಆಗಸ್ಟ್ 9ರಂದು ಪ್ರವಾಹದಿಂದ ಅವಾಂತರ ಸೃಷ್ಟಿಸಿದ್ದ ಮೃತ್ಯುಂಜಯ ನದಿಗೆ ಹಾಲೆರೆಯುವ ಹಾಗೂ ವಯನಾಡು ದುರಂತದಲ್ಲಿ ಮಡಿದವರಿಗೆ ಆ.8ರಂದು ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಅಂದು ಇಲ್ಲಿನ ಜನ ಊರನ್ನು ತೊರೆಯಲು ಮುಂದಾಗಿದ್ದರು. ಆದರೆ ಅವರ ಮನವೊಲಿಸಿ ಇಲ್ಲಿಯೇ ನೆಲೆಸುವಂತೆ ಮಾಡಲಾಗಿದೆ. 12 ಮನೆಗಳನ್ನು ನಿರ್ಮಿಸಿ ಕೊಡುವಲ್ಲಿ,1,500 ಅಡಕೆ ಗಿಡ ನೆಡಲು, ಗದ್ದೆಗಳ ಹೂಳು ತೆರೆವು ಸಹಿತ ಅನೇಕ ಕಾರ್ಯಗಳಲ್ಲಿ ಬದುಕು ಕಟ್ಟೋಣ ಬನ್ನಿ ತಂಡ ಕೈಜೋಡಿಸಿದೆ.ನಮ್ಮ ತಂಡದ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಕನಸು ಹೊತ್ತಿದ್ದೇವೆ” ಎಂದರು. ಅಂದಿನ ಪ್ರವಾಹ ಸಂತ್ರಸ್ತೆ ಯಶೋದಾ ಮಾತನಾಡಿ “ಕೊಳಂಬೆಯ ಅಭಿವೃದ್ಧಿಯಲ್ಲಿ ಬದುಕು ಕಟ್ಟೋಣ ತಂಡದ ಪಾತ್ರ ಹಿರಿದು. ಇಲ್ಲಿನ ಜನರ ಜೀವನ ಪುನರ್ ರೂಪಿಸಲು ಪಣತೊಟ್ಟು ಕೆಲಸ ಮಾಡಿದ ತಂಡಕ್ಕೆ ನಾವು ಆಭಾರಿಗಳಾಗಿದ್ದೇವೆ. ಇವರ ಸೇವೆ ರಾಜ್ಯವೇ ಗುರುತಿಸುವಂತಹ ಕೆಲಸ ಮಾಡಿದೆ. ಪ್ರವಾಹದಿಂದ ನಿರ್ಗತಿಕರಾಗಿದ್ದ ನಾವು ಮತ್ತೆ ಹಿಂದಿನ ಸ್ಥಿತಿಗೆ ಮರಳಿದ್ದೇವೆ ಎಂದರೆ ಅದಕ್ಕೆ ಈ ತಂಡವೇ ಕಾರಣ” ಎಂದರು.
ಎಸ್ ಡಿ ಎಂ ಕಾಲೇಜಿನ ಎನ್ನೆಸ್ಸೆಸ್ ವಿಭಾಗದ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಮಾತನಾಡಿ “ಪ್ರಕೃತಿ ಎದುರು ಮಾನವ ಕುಬ್ಜ.ಪ್ರಕೃತಿಯಿಂದ ಆದ ಹಾನಿಯನ್ನು ಮಾನವ ಮರು ಸೃಷ್ಟಿಸಬಹುದು.ಸಹಾಯ ನೀಡಿದವರನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದದ್ದು ಮುಖ್ಯ” ಎಂದರು.
ಅಂದು ಪ್ರವಾಹದ ಸಂದರ್ಭದಲ್ಲಿ ಆದ ನೆನಪು ಮತ್ತು ನಂತರದ ಜೀವನದ ಅನಿಸಿಕೆಯನ್ನು ಮಹಿಳೆ ಹಂಚಿಕೊಂಡರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಮಾತನಾಡಿದರು.
ಬದುಕು ಕಟ್ಟೋಣ ಬನ್ನಿ ತಂಡದ ಇನ್ನೋರ್ವ ಸಂಚಾಲಕ ರಾಜೇಶ್ ಪೈ, ತಾಪಂ ಮಾಜಿ ಸದಸ್ಯ ಶಶಿಧರ ಕಲ್ಮಂಜ, ಕೊಳಂಬೆ ಪರಿಸರದ ನಾಗರಿಕರು ಉಪಸ್ಥಿತರಿದ್ದರು. ಕಿರಣ್ ದೊಂಡೋಲೆ ಕಾರ್ಯಕ್ರಮ ನಿರೂಪಿಸಿದರು. ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ಉಗಿರೆ ಎಸ್ ಡಿ ಎಂ ಸ್ವಾಯತ್ತ ಕಾಲೇಜಿನ ಎನ್ನೆಸ್ಸೆಸ್ ವಿಭಾಗದ ವತಿಯಿಂದ ಕಾರ್ಯಕ್ರಮ ಜರಗಿತು.