ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ 2024-25ನೇ ಸಾಲಿನ ‘ಐ.ಟಿ. ಕ್ಲಬ್’ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇಂದು (ಜು.29ರಂದು) ಜರಗಿತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಉಜಿರೆಯ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಇದರ ಪಾರ್ಟ್ನರ್ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸುಮನಾ ಶೆಟ್ಟಿ, “ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ನಾವು ಅದರ ಜೊತೆ ಸಾಗಬೇಕು ಹೊರತು ಹಿಂದುಳಿಯಬಾರದು” ಎಂದರು.
“ತಂತ್ರಜ್ಞಾನ ಕ್ಷೇತ್ರ ಜನರಿಗೆ ಸದಾ ಪೂರಕವಾಗಿ ಇರಬೇಕು. ಸಮಾಜಕ್ಕೆ ನಮ್ಮ ಕೈಲಾದಷ್ಟು ಕೊಡುಗೆ ನೀಡುವುದರ ಕಡೆಗೆ ನಮ್ಮ ಗಮನ ಇರಲಿ” ಎಂದು ಅವರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿ, ಆಧುನಿಕತೆಯ ಯುಗದಲ್ಲಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ವಿದ್ಯಾರ್ಥಿ ಹಂತದಲ್ಲಿ ಉತ್ತಮ ಹಾಗೂ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ಕಾಲೇಜಿನಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಅವಕಾಶದಂತೆ ಸ್ವೀಕರಿಸಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಐ.ಟಿ. ಕ್ಲಬ್ ಸಂಯೋಜಕರಿಗೆ ಬ್ಯಾಡ್ಜ್ ನೀಡಿ ಅಭಿನಂದಿಸಲಾಯಿತು. ದ್ವಿತೀಯ ಬಿಸಿಎ ವಿದ್ಯಾರ್ಥಿಗಳು ತಯಾರಿಸಿದ ಭಿತ್ತಿಪತ್ರ ಅನಾವರಣಗೊಳಿಸಲಾಯಿತು. ವಿಭಾಗದ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.
ವಿಭಾಗ ಮುಖ್ಯಸ್ಥ ಶೈಲೇಶ್ ಕುಮಾರ್ ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಮೋನಲ್ ಸ್ವಾಗತಿಸಿದರು. ಆಶಾ ಹಾಗೂ ತಂಡ ಪ್ರಾರ್ಥಿಸಿದರು. ಐ.ಟಿ. ಕ್ಲಬ್ ಕಾರ್ಯದರ್ಶಿ ಅಂಶಿತಾ ವಂದಿಸಿದರು. ತ್ರಿಶಾ ಕಾರ್ಯಕ್ರಮ ನಿರೂಪಿಸಿದರು.