ಮಡಂತ್ಯಾರು: ವಿದ್ಯಾರ್ಥಿ, ಶಿಕ್ಷಕರು, ಪೋಷಕರು ಹಾಗೂ ಸಮಾಜ ಈ ನಾಲ್ಕು ಚಕ್ರಗಳಿಂದ ಶಾಲೆ ಎಂಬ ವಾಹನ ಮುಂದೆ ಸಾಗಲು ಸಾಧ್ಯ .ಪ್ರಸ್ತುತ ಕಾಲಘಟ್ಟದಲ್ಲಿ ಬುದ್ಧಿವಂತಿಕೆ ಹೆಚ್ಚಾಗುತ್ತಿದ್ದು ಮಾನವೀಯತೆ ನಶಿಸುತ್ತಿದೆ.ತಮ್ಮ ಮಕ್ಕಳಲ್ಲಿ ಸಚ್ಚಾರಿತ್ರ್ಯದ ಮೂಲಕ ಮಾನವೀಯತೆಯನ್ನು ಹೆಚ್ಚಿಸಬೇಕು.ವಿದ್ಯಾರ್ಥಿ, ಶಾಲಾ ಆಡಳಿತ, ಶಿಕ್ಷಕ ವರ್ಗ ಹಾಗೂ ಪೋಷಕರ ಮಧ್ಯೆ ಮಕ್ಕಳು ಸೇತುವೆಯಿದ್ದಂತೆ. ಶಾಲೆಯ ಸಕಾರಾತ್ಮಕ ವಿಚಾರವನ್ನು ಹೊರಗಡೆ ಹಾಗೂ ನಕಾರಾತ್ಮಕ ಅಂಶವನ್ನು ಶಾಲೆಗೆ ಸಂಬಂಧಪಟ್ಟವರಿಗೆ ತಿಳಿಸಿದಾಗ ಶಾಲೆಯ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ವಿದ್ಯಾರಶ್ಮಿ ಪದವಿ ಪೂರ್ವ ಕಾಲೇಜು ಸವಣೂರು ಇಲ್ಲಿನ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು.ಅವರು ಇತ್ತೀಚೆಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನಲ್ಲಿ ಜರುಗಿದ ಪ್ರಸಕ್ತ ಸಾಲಿನ ಪ್ರೌಢ ಶಾಲಾ ಹಾಗೂ ಪ.ಪೂ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಹೆತ್ತವರ ತಮ್ಮ ಪ್ರತಿಷ್ಠೆಯನ್ನು ಬದಿಗಿರಿಸಿ ಮಕ್ಕಳ ಮಾತು ವಿಚಾರಗಳನ್ನು ಆಲಿಸಿದಾಗ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯ. ತಮ್ಮ ಮಕ್ಕಳ ಎದುರು ಶಾಲೆಯ ಶಿಕ್ಷಕರನ್ನು ಯಾವತ್ತೂ ಗೇಲಿ ಮಾಡಬಾರದು ಎಂದು ಅವರು ಕಿವಿಮಾತು ಹೇಳಿದರು.ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ|ಸ್ಟ್ಯಾನಿ ಗೋವಿಯಸ್ ಅಧ್ಯಕ್ಷತೆ ವಹಿಸಿದ್ದರು.ಪ್ರಾಂಶುಪಾಲ ವಂ| ಜೆರೊಮ್ ಡಿಸೋಜಾ ಹಿಂದಿನ ಸಭೆಯ ವರದಿ ವಾಚಿಸಿ ಸಂಸ್ಥೆಯ ಶೈಕ್ಷಣಿಕ ಪ್ರಗತಿಯ ಕುರಿತು ಮಾಹಿತಿ ನೀಡಿದರು.
ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನ ಮಂಡಳಿಯ. ಉಪಾಧ್ಯಕ್ಷ ಜೆರಾಲ್ಡ್ ಮೋರಸ್,ಪ್ರೌಢ ಶಾಲಾ ಹಾಗೂ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ವಿನೋದ್ ರಾಕೇಶ್ ಡಿಸೋಜ ಹಾಗೂ ಲಿಯೋ ರೊಡ್ರಿಗಸ್ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಸಕ್ತ ಸಾಲಿನ ಪ್ರೌಢ ಶಾಲಾ ಹಾಗೂ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಕಾರ್ಯಕಾರಿ ಸಮಿತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.
ಪ್ರೌಢಶಾಲಾ ವಿಭಾಗಕ್ಕೆ ಐವನ್ ಸಿಕ್ವೇರಾ ಹಾಗೂ ಕಾಲೇಜು ವಿಭಾಗಕ್ಕೆ ವಿಲಿಯಂ ಪಿಂಟೋ ನೂತನ ಉಪಾಧ್ಯಕ್ಷರುಗಳಾಗಿ ಆಯ್ಕೆಯಾದರು.ಇದೇ ಸಂಧರ್ಭದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆಯ ಸಹಾಯಕ ಪ್ರಾಧ್ಯಾಪಕಿ ಮಕ್ಕಳ ತಜ್ಞೆ ಸೌಮ್ಯ ಎಸ್.ಜಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಮೇರಿ ಡಿಸೋಜ ಸ್ವಾಗತಿಸಿದರು. ಪ್ರೌಢ ಶಾಲಾ ಹಾಗೂ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ 2023-24 ನೇ ಸಾಲಿನ ಲೆಕ್ಕ ಪತ್ರವನ್ನು ಶಾಂತಿ ಮೇರಿ ಡಿಸೋಜಾ ಹಾಗೂ ಉಪನ್ಯಾಸಕರಾದ ವಿನ್ಸೆಂಟ್ ರೊಡ್ರಿಗಸ್ ಮಂಡಿಸಿದರು.
ಉಪನ್ಯಾಸಕರಾದ ಹೇಮಲತಾ ಎಂ, ಲಾವಣ್ಯ ಆಳ್ವಾ ಕೆ ಅತಿಥಿಗಳ ಪರಿಚಯಗೈದರು.ರೆನಿಶಾ ವೇಗಸ್ ವಂದಿಸಿ, ಲೆಜ್ವಿನ್ ಜೇಶಲ್ ಹಾಗೂ ಲೀನಾ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.