ಬೆಳ್ತಂಗಡಿ: ನೈಋತ್ಯ ಪದವೀಧರ ಕ್ಷೇತ್ರಕ್ಕೆ ಶೇ.78.82, ಶಿಕ್ಷಕರ ಕ್ಷೇತ್ರದಲ್ಲಿ ಶೇ.81.55 ಮತದಾನ- ಜೂ.6ರಂದು ಮೈಸೂರಿನಲ್ಲಿ ಮತ ಎಣಿಕೆ ಬಳಿಕ ಫಲಿತಾಂಶ ಘೋಷಣೆ

0

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಕರ್ನಾಟಕ ವಿಧಾನ ಪರಿಷತ್‌ನ ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಜೂ.೩ರಂದು ಶಾಂತಿಯುತ ಚುನಾವಣೆ ನಡೆದಿದೆ. ಪದವೀಧರರ ಕ್ಷೇತ್ರಕ್ಕೆ ಒಳಪಟ್ಟ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಒಟ್ಟು ೧,೫೪೩ ಮತದಾರರ ಪೈಕಿ ಪುರುಷರು, ೫೭೩ ಮಹಿಳೆಯರು ಸೇರಿದಂತೆ ಒಟ್ಟು ೬೪೩ ಮಂದಿ ಮತ ಚಲಾಯಿಸಿದ್ದು, ಶೇ.೭೮.೮೨ ಮತ ಚಲಾವಣೆಯಾಗಿದೆ. ಶಿಕ್ಷಕರ ಕ್ಷೇತ್ರದ ಒಟ್ಟು ೮೭೮ ಮತದಾರರ ಪೈಕಿ ೩೨೩ ಪುರುಷರು ಹಾಗೂ ೩೯೩ ಮಹಿಳೆಯರು ಸೇರಿದಂತೆ ಒಟ್ಟು ೭೧೬ ಮಂದಿ ಮತ ಚಲಾಯಿಸಿದ್ದು, ಶೇ.೮೧.೫೫ ಮತದಾನ ನಡೆದಿದೆ. ದ.ಕ. ಜಿಲ್ಲೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಶೇ.೭೨.೮೭ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಶೇ.೭೫.೭೧ ಮತದಾನ ದಾಖಲಾಗಿದೆ.
ಬೆಳ್ತಂಗಡಿಯಲ್ಲಿ ಮೂರು ಬೂತ್: ತಾಲೂಕು ಆಡಳಿತ ಸೌಧದಲ್ಲಿ ಒಟ್ಟು ಮೂರು ಬೂತ್‌ಗಳಲ್ಲಿ ಮತದಾನ ನಡೆದಿತ್ತು. ಪದವೀಧರರ ಕ್ಷೇತ್ರದ ಮತದಾನಕ್ಕೆ ಎರಡು ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಒಂದು ಬೂತ್ ನಿರ್ಮಿಸಲಾಗಿತ್ತು. ಅಗತ್ಯ ಸಂದರ್ಭಕ್ಕೆ ಒಂದು ಬೂತನ್ನು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಬೂತ್‌ಗೆ ತಲಾ ಓರ್ವ ಪಿ.ಆರ್.ಒ, ಎ.ಪಿ.ಆರ್.ಒ, ಡಿ ಗ್ರೂಪ್, ವಿಡಿಯೋ ಅಬ್ಸರ್ವರ್, ಮೈಕ್ರೋ ಅಬ್ಸರ್ವರ್, ಪೊಲೀಸ್ ಹಾಗೂ ತಲಾ ಇಬ್ಬರು ಪಿಒ ಕಾರ್ಯನಿರ್ವಹಿಸಿದ್ದಾರೆ. ಒಟ್ಟು ೨೪ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಚುನಾವಣೆಗೆ ಸಂಬಂಧಿಸಿದಂತೆ ಜೂನ್ ೨ರಂದು ಮಸ್ಟರಿಂಗ್ ಕಾರ್ಯ ತಾಲೂಕು ಕಚೇರಿಯಲ್ಲಿ ನಡೆಯಿತು. ಜೂ.೩ರಂದು ಬೆಳಗ್ಗೆ ೮ರಿಂದ ಸಂಜೆ ೪ ಗಂಟೆಯ ತನಕ ಮತದಾನ ನಡೆಯಿತು. ಸಂಜೆ ತಾಲೂಕು ಕಚೇರಿಯಲ್ಲಿ ಡಿ ಮಸ್ಟರಿಂಗ್ ನಡೆದು ಮತ ಪತ್ರಗಳನ್ನು ಮಂಗಳೂರಿನಲ್ಲಿರುವ ದ.ಕ. ಜಿಲ್ಲಾಧಿಕಾರಿಗಳ ಕಚೇರಿಗೆ ಕೊಂಡೊಯ್ದು ಅಲ್ಲಿಂದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಗೆ ಕೊಂಡೊಯ್ಯಲಾಯಿತು. ಜೂ.೬ರಂದು ಮೈಸೂರಿನ ವಿಭಾಗ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಘೋಷಣೆಯಾಗಲಿದೆ.
ಮುನ್ನೆಚ್ಚರಿಕೆ: ನೈಋತ್ಯ ಪದವೀಧರ ಕ್ಷೇತ್ರದಲ್ಲಿ ೪೩,೭೨೦ ಪುರುಷರು ಮತ್ತು ೪೧,೩೬೯ ಮಹಿಳೆಯರು ಹಾಗೂ ಓರ್ವ ಇತರ ಸೇರಿದಂತೆ ಒಟ್ಟು ೮೫,೦೯೦ ಮತದಾರರಿದ್ದರು. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ೧೦,೪೮೭ ಪುರುಷರು ಮತ್ತು ೧೨,೯೧೫ ಮಹಿಳೆಯರು ಸೇರಿ ಒಟ್ಟು ೨೩,೪೦೨ ಮತದಾರರಿದ್ದರು. ನೈಋತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿನ ದಕ್ಷಿಣ ಕನ್ನಡದಲ್ಲಿ ೧೬, ಕೊಡಗು-೫, ಚಿಕ್ಕಮಗಳೂರು-೧೨, ಉಡುಪಿ-೧೦, ಶಿವಮೊಗ್ಗ-೩೨ ಹಾಗೂ ದಾವಣಗೆರೆ-೪ ಸೇರಿದಂತೆ ೭೯ ಮತಟ್ಟೆಗಳನ್ನು ಸ್ಥಾಪಿಸಲಾಗಿತ್ತು. ನೈಋತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿನ ದಕ್ಷಿಣ ಕನ್ನಡ-೨೪, ಚಿಕ್ಕಮಗಳೂರು-೧೩, ದಾವಣಗೆರೆ-೮, ಕೊಡಗು-೬, ಶಿವಮೊಗ್ಗ-೩೮, ಉಡುಪಿ-೧೯ ಸೇರಿದಂತೆ ಒಟ್ಟು ೧೦೮ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿ ತಾಲೂಕು ಆಡಳಿತ ಸೌಧದಲ್ಲಿ ಪದವೀಧರರಿಗೆ ಎರಡು ಮತಗಟ್ಟೆ ಮತ್ತು ಶಿಕ್ಷಕರಿಗೆ ಒಂದು ಮತಗಟ್ಟೆಯ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು ಮೂರು ಬೂತ್‌ಗಳಲ್ಲಿ ತಲಾ ೭ ಮಂದಿಯಂತೆ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿ ೬೮೬ ಪುರುಷರು ಮತ್ತು ೮೫೭ ಮಹಿಳೆಯರು ಸೇರಿದಂತೆ ಒಟ್ಟು ೧೫೪೩ ಮತದಾರರಿದ್ದರು. ಚುನಾವಣೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ೧೪೪ ಸೆಕ್ಷನ್ ಜಾರಿಗೊಳಿಸಲಾಗಿತ್ತು. ವ್ಯಾಪಕ ಮುನ್ನೆಚ್ಚರಿಕೆ ವಹಿಸಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಬಾರ್, ವೈನ್‌ಶಾಪ್ ಸಹಿತ ಎಲ್ಲ ಮಾದರಿಯ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು.
ಮೊಬೈಲ್ ನಿರ್ಬಂಧ: ಮತಗಟ್ಟೆಗಳಿಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಿದ್ದು, ಹೊರಗಡೆ ಪ್ರತ್ಯೇಕ ಕೌಂಟರ್‌ಗಳಲ್ಲಿ ಬ್ಯಾಗ್, ಮೊಬೈಲ್ ಇಡಲು ವ್ಯವಸ್ಥೆ ಮಾಡಲಾಗಿತ್ತು.
ಪ್ರಾಶಸ್ತ್ಯದ ಮತದಾನ: ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆದಿದೆ. ಮತದಾರರ ಬೆರಳಿಗೆ ನೇರಳೆ ಬಣ್ಣದ ಶಾಯಿಯ ಗುರುತು ಹಾಕಲಾಗಿದೆ. ಪದವೀಧರ ಕ್ಷೇತ್ರದ ಮತದಾನಕ್ಕೆ ಬಲಗೈ ತೋರು ಬೆರಳು ಹಾಗೂ ಶಿಕ್ಷಕರ ಕ್ಷೇತ್ರದ ಮತದಾನಕ್ಕೆ ಬಲಗೈ ಮಧ್ಯದ ಬೆರಳಿಗೆ ಶಾಯಿ ಗುರುತು ಹಾಕಲಾಗಿದೆ. ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ೩೭೦ ಪುರುಷರು ಮತ್ತು ೫೦೮ ಮಹಿಳೆಯರು ಸೇರಿದಂತೆ ಒಟ್ಟು ೮೭೮ ಮತದಾರರಿದ್ದರು. ಈ ಚುನಾವಣೆಯಲ್ಲಿ ನೋಟಾ ಮತದಾನಕ್ಕೆ ಅವಕಾಶವಿರಲಿಲ್ಲ. ಬ್ಯಾಲೆಟ್ ಪೇಪರ್‌ನಲ್ಲಿ ಮತದಾನಕ್ಕೆ ಯಾವುದೇ ಮೊಹರು ಅಥವಾ ಶಾಯಿ ಗುರುತು ಹಾಕುವಂತಿರಲಿಲ್ಲ. ಇದರ ಬದಲಿಗೆ ಪ್ರಾಶಸ್ತ್ಯದ ಮತದಾನಕ್ಕೆ ಅವಕಾಶವಿತ್ತು.
ಪದವೀಧರ ಕ್ಷೇತ್ರದಲ್ಲಿ ೧೦, ಶಿಕ್ಷಕರ ಕ್ಷೇತ್ರದಲ್ಲಿ ೮ ಮಂದಿ ಕಣದಲ್ಲಿ: ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯನೂರು ಮಂಜುನಾಥ ಶಿವಮೊಗ್ಗ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಶಿವಮೊಗ್ಗ, ಸರ್ವ ಜನತಾ ಪಾರ್ಟಿಯಿಂದ ಜಿ.ಸಿ ಪಟೇಲ್, ಪಕ್ಷೇತರ ಅಭ್ಯರ್ಥಿಗಳಾಗಿ ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್, ಎಸ್.ಪಿ.ದಿನೇಶ್, ದಿನಕರ ಉಳ್ಳಾಲ್, ಬಿ.ಮಹಮ್ಮದ್ ತುಂಬೆ, ಡಾ.ಶೇಖ್ ಬಾವ ಮಂಗಳೂರು, ಷಡಾಕ್ಷರಪ್ಪ ಜಿ.ಆರ್ ಬೊಮ್ಮನಕಟ್ಟೆ ಶಿವಮೊಗ್ಗ ಮತ್ತು ಷಹಾರಾರh ಮುಜಾಹಿದ್ ಸಿದ್ದಿಕ್ಕಿ ಉರಗದೂರು ಶಿವಮೊಗ್ಗ ಅವರು ಕಣದಲ್ಲಿದ್ದರು. ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಲಿ ಸದಸ್ಯರಾಗಿರುವ ಜೆಡಿಎಸ್ ಮುಖಂಡ ಎಸ್.ಎಲ್ ಬೋಜೇ ಗೌಡ ಚಿಕ್ಕಮಗಳೂರು, ಕಾಂಗ್ರೆಸ್‌ನಿಂದ ಡಾ.ಕೆ.ಕೆ.ಮಂಜುನಾಥ ಕುಮಾರ್ ಕುಡ್ಲೂರು ಕುಶಾಲನಗರ, ಪಕ್ಷೇತರರಾಗಿ ನಂಜೇಶ್ ಬೆಣ್ಣೂರು ಚಿಕ್ಕಮಗಳೂರು, ಡಾ|ಎಸ್.ಆರ್.ಹರೀಶ್ ಆಚಾರ್ಯ ನಾಗುರಿ ಮಂಗಳೂರು, ಡಾ.ಅರುಣ್ ಹೊಸಕೊಪ್ಪ ತೀರ್ಥಹಳ್ಳಿ ಶಿವಮೊಗ್ಗ, ಡಾ.ನರೇಶ್ಚಂದ್ ಹೆಗ್ಡೆ ಶಿವಳ್ಳಿ ಉಡುಪಿ, ಭಾಸ್ಕರ ಶೆಟ್ಟಿ ಕುಂದಾಪುರ ಮತ್ತು ಕೆ.ಕೆ. ಮಂಜುನಾಥ ಕುಮಾರ್ ಚಿಕ್ಕಮಗಳೂರು ಅಂತಿಮ ಕಣದಲ್ಲಿದ್ದರು.

ಪುತ್ತೂರಿನ ಮತದಾರನ ಹೆಸರು ಬೆಳ್ತಂಗಡಿ ಮತಗಟ್ಟೆಯಲ್ಲಿ : ಕಳೆದ ಹಲವು ವರ್ಷಗಳಿಂದ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪುತ್ತೂರಿನಲ್ಲೇ ಮತ ಚಲಾಯಿಸುತ್ತಿದ್ದ ಪುತ್ತೂರು ಕಸಬಾ ನಿವಾಸಿಯೊಬ್ಬರ ಹೆಸರು ಈ ಬಾರಿ ಬೆಳ್ತಂಗಡಿ ಮತಗಟ್ಟೆಗೆ ವರ್ಗಾವಣೆಗೊಂಡಿದೆ. ಇದಕ್ಕೆ ಯಾರು ಹೊಣೆ ಎಂದು ಮತದಾರ ಪ್ರಶ್ನಿಸಿದ್ದಾರೆ.
ಪುತ್ತೂರು ಸಾಲ್ಮರ ಕೊಟೇಚಾ ಹಾಲ್ ಬಳಿಯ ಖಾಯಂ ನಿವಾಸಿ ಜಿನ್ನಪ್ಪ ಗೌಡ ಮಳವೇಲು ಮತ್ತು ಅವರ ಪತ್ನಿ ಮತ ಚಲಾಯಿಸಲೆಂದು ಪುತ್ತೂರು ತಾಲೂಕು ಕಚೇರಿಯ ಮತಗಟ್ಟೆಗೆ ಬಂದಾಗ ಜಿನ್ನಪ್ಪ ಗೌಡ ಅವರ ಪತ್ನಿಯ ಹೆಸರು ಪುತ್ತೂರು ಮತಗಟ್ಟೆಯಲ್ಲೇ ಇದ್ದು, ಜಿನ್ನಪ್ಪ ಗೌಡ ಅವರ ಹೆಸರು ಮಾತ್ರ ಪುತ್ತೂರು ಮತಗಟ್ಟೆಯಿಂದ ಬೆಳ್ತಂಗಡಿಯ ಮತಗಟ್ಟೆ ಸಂಖ್ಯೆ ೨೧.ಸೀರಿಯಲ್ ನಂ ೩೦೫ರಲ್ಲಿರುವುದು ಗಮನಕ್ಕೆ ಬಂತು.ಇದರಿಂದಾಗಿ ಜಿನ್ನಪ್ಪ ಗೌಡರು ಮತ ಚಲಾಯಿಸಲಾಗದೆ ಅವರ ಪತ್ನಿ ಮಾತ್ರ ಮತಚಲಾಯಿಸಿದ್ದಾರೆ.
ಯಾರು ಹೊಣೆ?: ಇಲಾಖೆಯ ತಪ್ಪಿನಿಂದ ನನಗೆ ಮತ ಚಲಾಯಿಸಲು ಆಗಿಲ್ಲ.ಇದಕ್ಕೆ ಯಾರು ಹೊಣೆ ಎಂದು ಜಿನ್ನಪ್ಪ ಗೌಡ ಮಳವೇಲು ಪ್ರಶ್ನಿಸಿದ್ದಾರೆ.ಈ ಕುರಿತು ತಹಸೀಲ್ದಾರರಲ್ಲೂ ನಾನು ವಿಚಾರಿಸಿzನೆ. ಅವರು ಕೈ ಮುಗಿದು ಕಳುಹಿಸಿದ್ದಾರೆ ಎಂದು ಅವರು ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್, ಬಿಜೆಪಿಯಲ್ಲಿ ಬಂಡಾಯ ಅಭ್ಯರ್ಥಿಗಳು-ಕುತೂಹಲ ಕೆರಳಿಸಿದ ಫಲಿತಾಂಶ: ವಿಧಾನಪರಿಷತ್ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಪ್ರತಿಷ್ಠೆಯ ಕಣವಾಗಿತ್ತು. ಬಂಡಾಯ ಅಭ್ಯರ್ಥಿಗಳ ಸ್ಪರ್ಧೆ ಆಡಳಿತ ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ದಶಕಗಳಿಂದ ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಡುತ್ತಿದೆ. ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ಸತತ ೫ ಬಾರಿ ಜಯ ಸಾಧಿಸಿದ್ದರು. ಕಳೆದ ಬಾರಿ ಬಿಜೆಪಿಯಿಂದ ಗೆದ್ದಿದ್ದ ಆಯನೂರು ಮಂಜುನಾಥ್ ಈಗ ಪಕ್ಷ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಿವಮೊಗ್ಗದ ಎಸ್.ಪಿ.ದಿನೇಶ್ ಈ ಬಾರಿ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಶಿವಮೊಗ್ಗದ ವೈದ್ಯ ಡಾ.ಧನಂಜಯ ಸರ್ಜಿ ಸ್ಪರ್ಧೆಗೆ ಅವಕಾಶ ಪಡೆದಿರುವುದನ್ನು ವಿರೋಧಿಸಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಬಂಡಾಯದ ಕಹಳೆ ಮೊಳಗಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲೂ ಬಂಡಾಯ ಮೊಳಗಿದ್ದು ಫಲಿತಾಂಶ ಕುತೂಹಲ ಕೆರಳಿಸಿದೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೊಡಗಿನ ಡಾ.ಕೆ.ಕೆ.ಮಂಜುನಾಥ್ ಕುಮಾರ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ವರ್ಷದಿಂದ ಸಿದ್ಧತೆ ನಡೆಸಿದ್ದ ಚಿಕ್ಕಮಗಳೂರಿನ ನಂಜೇಶ್ ಬೆನ್ನೂರ್ ತೀವ್ರ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕೊಡಗಿನ ಕೆ.ಕೆ.ಮಂಜುನಾಥ್ ಕುಮಾರ್ ಎನ್ನುವವರು ಪಕ್ಷೇತರ ಅಭ್ಯರ್ಥಿಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿಗೂ ಅದೇ ಹೆಸರು ಇರುವ ಕಾರಣ ಗೊಂದಲಕ್ಕೆ ಕಾರಣವಾಗಿದೆ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲೂ ಒಳಗೆ ಸಣ್ಣಪುಟ್ಟ ಅಸಮಾಧಾನಗಳಿವೆ. ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಮಂಗಳೂರಿನ ಡಾ.ಎಸ್.ಆರ್. ಹರೀಶ್ ಆಚಾರ್ಯ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ೧೯೯೪ ಮತ್ತು ೨೦೦೦ ಚುನಾವಣೆಯಲ್ಲಿ ಬಿಜೆಪಿಯ ಕೆ.ಬಾಲಕೃಷ್ಣ ಭಟ್, ೨೦೦೬ ಮತ್ತು ೨೦೧೨ರ ಚುನಾವಣೆಯಲ್ಲಿ ಬಿಜೆಪಿಯ ಕ್ಯಾ.ಗಣೇಶ್ ಕಾರ್ಣಿಕ್ ಜಯಭೇರಿ ಬಾರಿಸಿದ್ದರು. ೨೦೧೮ರ ಚುನಾವಣೆಯಲ್ಲಿ ಕ್ಷೇತ್ರ ಬಿಜೆಪಿ ಕೈ ತಪ್ಪಿತ್ತು. ಗಣೇಶ್ ಕಾರ್ಣಿಕ್ ವಿರುದ್ಧ ಜೆಡಿಎಸ್‌ನ ಎಸ್. ಎಲ್.ಭೋಜೇಗೌಡ ಜಯ ಸಾಧಿಸಿದ್ದರು. ಈ ಬಾರಿಯೂ ಬೋಜೇಗೌಡರವರೇ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಅವಕಾಶ ಪಡೆದಿದ್ದಾರೆ.

ಶಾಸಕ ಹರೀಶ್ ಪೂಂಜ ದಂಪತಿ ಮತದಾನ: ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಪತ್ನಿ ಡಾ.ಸ್ವೀಕೃತಾ ಪೂಂಜ ಬೆಳ್ತಂಗಡಿ ಆಡಳಿತ ಸೌಧದಲ್ಲಿ ಮತ ಚಲಾಯಿಸಿದರು.

ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮತ ಚಲಾವಣೆ: ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಪತ್ನಿ ನಮಿತಾರೊಂದಿಗೆ ಜೂ.೩ರ ಬೆಳಗ್ಗೆ ಶಿವಮೊಗ್ಗ ವಿನೋಬ ನಗರದ ದೇಶೀಯ ವಿದ್ಯಾ ಶಾಲಾ ಹೈಸ್ಕೂಲ್ ವಿಭಾಗದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಮತದಾನ: ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಬೆಳ್ತಂಗಡಿ ಆಡಳಿತ ಸೌಧದಲ್ಲಿ ಮತ ಚಲಾಯಿಸಿದರು.

ಕೆಪಿಸಿಸಿ ಪ್ರ.ಕಾರ್ಯದರ್ಶಿ ರಕ್ಷಿತ್ ಶಿವರಾಂ ಮತದಾನ: ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೆಳ್ತಂಗಡಿ ಆಡಳಿತ ಸೌಧದಲ್ಲಿ ಮತದಾನ ಮಾಡಿದರು. ನಂತರ ಬೂತ್‌ಗೆ ಭೇಟಿ ನೀಡಿ ಪಕ್ಷದ ಪದಾಧಿಕಾರಿಗಳನ್ನು ಭೇಟಿ ಮಾಡಿದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೆ. ಬಂಗೇರ ಕಾಶಿಪಟ್ಣ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ನಾಗೇಶ್ ಕುಮಾರ್ ಗೌಡ ಹಾಗೂ ಚುನಾವಣಾ ಉಸ್ತುವಾರಿಗಳು ಉಪಸ್ಥಿತರಿದ್ದರು.

ಬಂಟ್ವಾಳದಲ್ಲಿ ಮತ ಚಲಾಯಿಸಿದ ಮುಂಡಾಜೆಯ ಅಶ್ವಿನಿ ಹೆಬ್ಬಾರ್: ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಉಂಟಾದ ಎಡವಟ್ಟಿನಿಂದ ಬೆಳ್ತಂಗಡಿ ತಾಲೂಕಿನಲ್ಲಿ ವಾಸ್ತವ್ಯವಿರುವ ಮುಂಡಾಜೆಯ ಅಶ್ವಿನಿ ಎ.ಹೆಬ್ಬಾರ್ ಬಂಟ್ವಾಳದ ತಾಲೂಕು ಆಡಳಿತ ಸೌಧದಲ್ಲಿ ಒಟ್ಟು ೫೫ ಕಿಮೀ. ಕ್ರಮಿಸಿ ಮತ ಚಲಾಯಿಸಿದರು.

LEAVE A REPLY

Please enter your comment!
Please enter your name here