ಕ್ಷಯರೋಗ ನಿವಾರಣೆಯ ಚಿಕಿತ್ಸಾ ಕ್ರಮಕ್ಕೆ ಪೂರಕ ಆವಿಷ್ಕಾರ- ಎಸ್.ಡಿ.ಎಂ ಪ್ರಾಧ್ಯಾಪಕರ ಸಂಶೋಧನೆಗೆ ಮತ್ತೊಂದು ಅಮೇರಿಕನ್ ಪೇಟೆಂಟ್

0

ಉಜಿರೆ: ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರದ ಸಹಪ್ರಾಧ್ಯಾಪಕಿ ಡಾ.ನಫೀಸತ್.ಪಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ.ಶಶಿಪ್ರಭಾ ಅವರು ಕೈಗೊಂಡ ಸಂಶೋಧನೆಗೆ ಮತ್ತೊಂದು ಪ್ರತಿಷ್ಠಿತ ಅಮೆರಿಕನ್ ಪೇಟೆಂಟ್ ಲಭಿಸಿದೆ. ಕ್ಷಯರೋಗದ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವಹಿಸುವ ಪ್ರತಿರೋಧಾತ್ಮಕ ವೈರಾಣುಗಳನ್ನು ರೂಪಿಸುವಲ್ಲಿ ಈ ಸಂಶೋಧನೆಯು ಪ್ರಮುಖ ಮೈಲಿಗಲ್ಲಾಗಿದೆ. ವಿಶ್ವದೆಲ್ಲೆಡೆ ಹಲವರನ್ನು ಬಾಧಿಸುತ್ತಿರುವ ಕ್ಷಯರೋಗಾಣುಗಳಿಗೆ ಪ್ರತಿರೋಧವನ್ನೊಡ್ಡುವಲ್ಲಿ ಈ ಸಂಶೋಧನೆಯ ಫಲಿತಗಳನ್ನು ಆಧರಿಸಿದ ಚಿಕಿತ್ಸಕ ಅಂಶಗಳು ಸಹಾಯಕವಾಗಲಿವೆ.

ಸೌದಿ ಅರೇಬಿಯಾದ ಕಿಂಗ್ ಫೈಸಲ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ‘ಆಕ್ಸೋ ಇಮಿಡಜೋಲಿಡಿನ್ ಡಿರೈವಟೀಸ್ ಆಸ್ ಆಂಟಿಟ್ಯುಬರ್ಕ್ಯುಲಾರ್ ಏಜೆಂಟ್ಸ್’ ಕುರಿತು ಇಬ್ಬರೂ ಜಂಟಿಯಾಗಿ ಕೈಗೊಂಡಿದ್ದ ಸಂಶೋಧನೆಗೆ ಈ ಪೇಟೆಂಟ್ ಮನ್ನಣೆ ಸಿಕ್ಕಿದೆ. ಮಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಜಗದೀಶ್ ಪ್ರಸಾದ್ ಡಿ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ಕೈಗೊಳ್ಳಲಾಗಿತ್ತು.

ಈ ಹಿಂದಿನ ಸಂಶೋಧನೆಗೆ ಸಿಕ್ಕ ಪ್ರಾಶಸ್ತ್ಯದಂತೆಯೇ ಪ್ರಸಕ್ತ ಸಂಶೋಧನೆಗೂ ಇಪ್ಪತ್ತು ವರ್ಷಗಳ ಅವಧಿಯವರೆಗೆ ಅಮೆರಿಕನ್ ಪೇಟೆಂಟ್‌ನ ಮಾನ್ಯತೆ ಚಾಲ್ತಿಯಲ್ಲಿರಲಿದೆ. ಈ ನಿರ್ದಿಷ್ಟ ಸಂಶೋಧನಾ ಫಲಿತಗಳ ಆಧಾರ, ಆವಿಷ್ಕಾರ, ಬಳಕೆ ಮತ್ತು ಮಾರಾಟದ ಹಕ್ಕು ಸ್ವಾಮ್ಯತೆ ಈ ಇಬ್ಬರೂ ಪ್ರಾಧ್ಯಾಪಕರೊಂದಿಗೆ ಇರಲಿದೆ.

ಇದಕ್ಕೂ ಮುಂಚೆ ಈ ಇಬ್ಬರೂ ಪ್ರಾಧ್ಯಾಪಕರು ‘ಬೆಂಝಲಿಡೀನ್ ಡಿರೈವೇಟಿವ್ಸ್ ಆಫ್ ಫಿನೊಬಾಮ್ ಆಸ್ ಆಂಟಿ ಇನ್‌ಫ್ಲಮೇಟರಿ ಏಜೆಂಟ್’ ಕುರಿತು ಕೈಗೊಂಡಿದ್ದ ಸಂಶೋಧನೆಯೂ ಅಮೆರಿಕನ್ ಪೇಟೆಂಟ್ ಪ್ರಾಶಸ್ತ್ಯ ಪಡೆದುಕೊಂಡಿತ್ತು. ದೈಹಿಕ ನೋವನ್ನು ನಿವಾರಿಸುವ ಚಿಕಿತ್ಸಕ ವಿಧಾನಗಳನ್ನು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಔಷಧೀಯ ಪ್ರಯೋಜನ ವಿಸ್ತರಿಸುವ ಪ್ರಾಯೋಗಿಕ ಮಾರ್ಗದರ್ಶಿ ಪರಿಕಲ್ಪನೆಯನ್ನು ಕೊಡುಗೆಯಾಗಿ ನೀಡಿತ್ತು. ಇದೀಗ ಅಮೆರಿಕನ್ ಪೇಟೆಂಟ್‌ನ ಮನ್ನಣೆ ಪಡೆದ ‘ಆಕ್ಸೋ ಇಮಿಡಜೋಲಿಡಿನ್ ಡಿರೈವಟೀಸ್ ಆಸ್ ಆಂಟಿಟ್ಯುಬರ್ಕ್ಯುಲಾರ್ ಏಜೆಂಟ್ಸ್’ ಸಂಬಂಧಿತ ನಿಖರ ಚಿಕಿತ್ಸಾ ಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರಸಕ್ತ ಸಂಶೋಧನೆಯ ಮೂಲಕ ಮಹತ್ವದ ಕೊಡುಗೆ ನೀಡಿದಂತಾಗಿದೆ.

ಅಮೆರಿಕನ್ ಪೇಟೆಂಟ್‌ಗೆ ವಿಶ್ವದಾದ್ಯಂತ ವಿಶೇಷ ಮನ್ನಣೆ ಇದೆ. ಉಜಿರೆಯಂತಹ ಗ್ರಾಮೀಣ ವಲಯದ ವ್ಯಾಪ್ತಿಯಲ್ಲಿ ಮಹತ್ವದ ಶೈಕ್ಷಣಿಕ ಪ್ರಯೋಗಗಳೊಂದಿಗೆ ಗುರುತಿಸಿಕೊಂಡಿರುವ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರದ ವಿಭಾಗದಲ್ಲಿ ಈ ಸಂಶೋಧನೆ ನಿರ್ವಹಿಸಲ್ಪಟ್ಟಿದ್ದು ವಿಶೇಷ. ಇಬ್ಬರೂ ಪ್ರಾಧ್ಯಾಪಕರ ಸಂಶೋಧನೆಗೆ ಮತ್ತೊಮ್ಮೆ ಅಮೆರಿಕನ್ ಪೇಟೆಂಟ್ ಲಭಿಸಿರುವುದು ಪ್ರಶಂಸನಾರ್ಹ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವಿಶ್ವನಾಥ್ ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here